ಬೆಳ್ತಂಗಡಿ: ಕೃಷಿಗಾಗಿ ಜಮೀನಿನಲ್ಲಿರುವ ಮರ ಕಡಿಯುತ್ತಿರುವ ವೇಳೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು 5 ಲಕ್ಷ ರೂ ಲಂಚಕ್ಕೆ ಬೇಡಿ ಇಟ್ಟು, ಹಣ ಕೊಡದಿದ್ದಾಗ ಜಾತಿ ನಿಂದನೆ ಮಾಡಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕಜೆ ಎಂಬಲ್ಲಿ ತನ್ನದೇ ಸ್ವಾಧೀನದಲ್ಲಿರುವ ವ್ಯಕ್ತಿಯೋರ್ವರ ಜಮೀನಿನಲ್ಲಿ ಅಡಿಕೆ ಕೃಷಿ ಮಾಡುವ ಉದ್ದೇಶದಿಂದ ಆ ಭೂಮಿಯಲ್ಲಿ ಹೆಬ್ಬಲಸು, ಬಣ್ಪು, ರಾಮಪತ್ರೆ ಹಾಗೂ ಮಾವು ಮರಗಳಿದ್ದು, ಗೇರು ಕೃಷಿ ಕೂಡ ಇತ್ತು. ಗೇರು ಕೃಷಿ ಲಾಭ ಇಲ್ಲದೆ ಇದ್ದುದರಿಂದ ಆ ಮರಗಳನ್ನು ಕಡಿದಿರುತ್ತಾರೆ.
2021ರ ಡಿ.9ರಂದು ವಾಹನದಲ್ಲಿ ಕಡಿದ ಮರವನ್ನು ಹೊರಗಡೆ ಸಾಗಾಟ ಮಾಡಿ ರಾಶಿ ಹಾಕುತ್ತಿದ್ದ ವೇಳೆ ಅರಣ್ಯ ಇಲಾಖೆಯ ಆಧಿಕಾರಿಗಳು ಸ್ಥಳಕ್ಕೆ ಬಂದು ಕಡಿದು ಹಾಕಿದ ಮರ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ.
ಜೊತೆ ಜಾಗದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮರುದಿನ ಅಂದರೆ 2021ರ ಡಿ.10 ರಂದು ಯಾವುದೇ ನೋಟೀಸನ್ನು ನೀಡದೇ ಮತ್ತೆ ಅದೇ ಜಮೀನಿಗೆ ಅರಣ್ಯಾಧಿಕಾರಿಗಳು ಅಕ್ರಮ ಪ್ರವೇಶ ಮಾಡಿದ್ದಾರೆ.
ಜಮೀನಿನ ಮಾಲೀಕ ಹಾಗೂ ಆತನ ತಾಯಿಯನ್ನು ಸ್ಥಳಕ್ಕೆ ಬರಹೇಳಿ ವಿಚಾರಿಸಿ ಮರಗಳನ್ನು ಅರಣ್ಯ ಇಲಾಖಾಧಿಕಾರಿಗಳು ವಶಪಡಿಸಿಕೊಂಡು ಡಿಪ್ಪೋಗೆ ಸಾಗಿಸಿದ್ದಾರೆ. ಜೊತೆಗೆ ಮತ್ತಷ್ಟು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸಿ 5,00,000 ಲಕ್ಷ ರೂ ಬೇಡಿಕೆ ಇಟ್ಟಿದ್ದಾರೆ.
ಆಗ ಜಮೀನು ಮಾಲೀಕ ಹಣ ನೀಡಲು ಸಾಧ್ಯವಿಲ್ಲ ಎಂದಾಗ ಆತನನ್ನು ಬೆದರಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಜಮೀನು ಮಾಲೀಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.