ಮಂಗಳೂರು: ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮದ ಮಸೀದಿ ಕಟ್ಟಡದಲ್ಲಿ ಪ್ರಾಚೀನ ದೇವಸ್ಥಾನ ಪತ್ತೆಯಾಗಿದ್ದು, ಮಸೀದಿ ಪರವಾನಿಗೆ ರದ್ದುಗೊಳಿಸಿ, ಪುರಾತತ್ವ ಇಲಾಖೆಗೆ ತನಿಖೆ ನಡೆಸಲು ಆದೇಶಿಸಲು ಹಾಗೂ ಯಾವುದೇ ನವೀಕರಣ ಕಾಮಗಾರಿ ನಡೆಸದಂತೆ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ಹಿಂದು ಜಾಗರಣ ವೇದಿಕೆ ವತಿಯಿಂದ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಲಿಖಿತ ಮನವಿ ಸಲ್ಲಿಸಿದರು.
ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮ, ಗಂಜಿಮಠ ಪಂಚಾಯಿತಿಯಲ್ಲಿರುವ ಸರ್ವೇ ನಂ 1/10 ನಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿ ಕಟ್ಟಡ ನವೀಕರಣ ಸಂಧರ್ಭದಲ್ಲಿ ಮಸೀದಿ ಅರ್ಧ ಕಟ್ಟಡ ಕೆಡವಿದಾಗ ಪುರಾತನ ದೇವಸ್ಥಾನ ಪತ್ತೆಯಾಗಿದೆ.

ಮೇಲ್ನೋಟಕ್ಕೆ ನೋಡಿದಾಗ ಪುರಾತನ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಡ ಕಟ್ಟಿರುವುದು ಕಂಡುಬರುತ್ತದೆ. ಕಟ್ಟಡದ ಒಳಗೆ ಮತ್ತು ಹೊರಗಡೆ ನೋಡುವಾಗ ಪ್ರಾಚೀನ ದೇವಸ್ಥಾನದ ಕಟ್ಟಡದ ಶೈಲಿಯಲ್ಲಿ ಕಂಡು ಬರುತ್ತಿದೆ. ಆದುದರಿಂದ ಗಂಜಿಮಠ ಗ್ರಾಮಪಂಚಾಯತಿ ನೀಡಿದ ಕಟ್ಟಡ ಪರವಾನಿಗೆ ನಂ 11/2021/22 ರ ಪ್ರಕಾರ ನೀಡಿರುವ ಮಸೀದಿ ನವೀಕರಣದ ಅನುಮತಿಯನ್ನು ರದ್ದುಗೊಳಿಸಿ ಇದನ್ನು ಪರಿಶೀಲಿಸಿ ಪುರಾತತ್ವ ಇಲಾಖೆಗೆ ತನಿಖೆ ನಡೆಸಲು ಆದೇಶಿಸಬೇಕು ಮತ್ತು ಆ ಸ್ಥಳದಲ್ಲಿರುವ ಕಟ್ಟಡವನ್ನು ಯಥಾಸ್ಥಿತಿಯಲ್ಲಿರುವಂತೆ ಕಾಪಾಡಿಕೊಳ್ಳಲು ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ಮಾತನಾಡಿದ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಇಂದು ಸಂಜೆಯ ಒಳಗೆ ನವೀಕರಣ ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಮಸಿದೀ ಆಡಳಿತ ಕಮಿಟಿಗೆ ನೋಟಿಸು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖರಾದ ಹರೀಶ್ ಮಟ್ಟಿ, ಪ್ರಶಾಂತ್ ಕೆಂಪುಗುಡ್ಡೆ, ಹಿಂಜಾವೇ ನಗರ ಯುವವಾಹಿನಿ ಸಂಯೋಜಕರಾದ ಚೇತನ್ ಮೂಡುಶೆಡ್ಡೆ, ಶಿವಪ್ರಸಾದ್ ಧನುಪೂಜೆ, ಸಂದೀಪ್ ಮಟ್ಟಿ, ಶಿವರಾಜ್ ಮಟ್ಟಿ ಉಪಸ್ಥಿತರಿದ್ದರು.