ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಯೋರ್ವ ಮಲಗಿದಲ್ಲೇ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿಯಲ್ಲಿ ಮೇ.3 ರಂದು ರಾತ್ರಿ ನಡೆದಿದೆ.

ಹಿಂದಿ ಭಾಷಿಕನಾದ ವ್ಯಕ್ತಿಯೋರ್ವ ಅನಾರೋಗ್ಯದಿಂದಾಗಿ ಉಪ್ಪಿನಂಗಡಿ ಬಳಿಯ ಖಾಸಗಿ ಕ್ಲಿನಿಕ್ ಒಂದಕ್ಕೆ ರಾತ್ರಿ ಆಗಮಿಸಿದ್ದು, ಈತನನ್ನು ಪರೀಕ್ಷಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಈತನ ಎದೆಬಡಿತ ಕಮ್ಮಿ ಇದೆಯೆಂದು ಹೇಳಿ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಲು ತಿಳಿಸಿದ್ದರು.
ಆದರೆ ಆತ, ಇಲ್ಲಿ ನನ್ನವರು ಯಾರೂ ಇಲ್ಲ ಎಂದಾಗ, ವೈದ್ಯರು ಆತನನ್ನು ಅಲ್ಲೇ ಕುಳಿತುಕೊಳ್ಳಲು ಹೇಳಿ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆ್ಯಂಬುಲೆನ್ಸ್ ಸ್ವಲ್ಪ ತಡವಾಗಿ ಬಂದಿತ್ತಾದರೂ, ಅಷ್ಟರಲ್ಲಾಗಲೇ ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದರು.
ಸುಮಾರು ಎರಡು ಗಂಟೆಯ ನಂತರ ಆಸ್ಪತ್ರೆಯ ಹೊರಗಡೆ ಸ್ವಲ್ಪ ದೂರದಲ್ಲಿ ಆತ ಮಲಗಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವೈದ್ಯರಲ್ಲಿ ತನ್ನ ಹೆಸರನ್ನು ರಾಜೇಶ್ ಎಂದು ಹೇಳಿದ್ದ ಈತ, ತಾನು ಇಲ್ಲಿ ಕೆಲಸಕ್ಕಿರುವುದಾಗಿ ಹೇಳಿ ಮಾಲಕನ ಮೊಬೈಲ್ ನಂಬರೊಂದನ್ನು ಕೊಟ್ಟಿದ್ದರು. ಆದರೆ ಆ ನಂಬರಿಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬರುತ್ತಿದ್ದು, ಮೃತನ ಕುರಿತ ನಿಖರ
ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ
ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.