ಬೆಂಗಳೂರು: ಹಳೆಯ ವಾಹನಗಳ ರಿಜಿಸ್ಟ್ರೇಷನ್ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ನವೀಕರಣಕ್ಕೆ ದುಬಾರಿ ಶುಲ್ಕ ಮತ್ತು ದಂಡ ವಿಧಿಸುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಲಾರಿ ಮಾಲೀಕರ ಒಕ್ಕೂಟ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಸಾರಿಗೆ ಇಲಾಖೆ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಸರ್ಕಾರ 2022ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ದಂಡದ ಪ್ರಮಾಣದಲ್ಲಿ ಭಾರಿ ಏರಿಕೆ ಮಾಡಿದೆ. ನೋಂದಣಿ ಮತ್ತು ಫಿಟ್ನೆಸ್ ಪ್ರಮಾಣಪತ್ರಗಳ ನವೀಕರಣಕ್ಕೆ 10 ಸಾವಿರ ರೂಪಾಯಿ ಶುಲ್ಕ ವಿಧಿಸಲಾಗಿದೆ.
ಒಂದು ವೇಳೆ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಣದ ಅವಧಿ ಮುಗಿದಿದ್ದರೆ ಸಾರಿಗೇತರ ವಾಹನಗಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 500 ರೂ ದಂಡ ವಿಧಿಸುತ್ತಿದೆ. ಇದು ದುಬಾರಿ ಶುಲ್ಕ ಮತ್ತು ದಂಡವಾಗಿದ್ದು, ವಾಹನಗಳ ಮಾಲಿಕರಿಗೆ ಹೊರೆಯಾಗಿದೆ. ಅಲ್ಲದೇ, ಪ್ರತಿ ದಿನದ ವಿಳಂಬಕ್ಕೂ ಅಧಿಕ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿದೆ. ಭಾರೀ ಸರಕು ವಾಹನಗಳ ನೋಂದಣಿ ಮತ್ತು ನವೀಕರಣಕ್ಕೆ 10 ಸಾವಿರ ರೂಪಾಯಿಗಳನ್ನು ನಿಗದಿಪಡಿಸಿದ್ದರೂ ಸಹ ಹೆಚ್ಚುವರಿ ದಿನವೊಂದಕ್ಕೆ 1,500 ರೂಪಾಯಿ ಮತ್ತು ಮಧ್ಯಮ ಸರಕು ವಾಹನಗಳಿಗೆ ದಿನವೊಂದಕ್ಕೆ 1,300 ರೂಪಾಯಿ ವಿಳಂಬ ಶುಲ್ಕವನ್ನು ವಿಧಿಸುತ್ತಿದೆ.
ಹಳೆಯ ವಾಹನಗಳಿಗೆ ಭಾರೀ ಮೊತ್ತದ ದಂಡ ಪಾವತಿಸಿ ನಿರ್ವಹಣೆ ಮಾಡುವುದು ಕಷ್ಟ. ಆದ್ದರಿಂದ ಸರ್ಕಾರದ ದಂಡ ಶುಲ್ಕ ಹೆಚ್ಚಳದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.