ಒಬ್ಬ ವ್ಯಕ್ತಿಯು ಅಪರಾಧ ಪ್ರಕರಣದಲ್ಲಿ ಶಿಕ್ಷೆಗೊಳಗಾಗದಿದ್ದರೂ, ಅಥವಾ ಆತನ ವಿರುದ್ಧ ಯಾವುದೇ ಎಫ್.ಐ.ಆರ್. ದಾಖಲಾಗದಿದ್ದರೂ ಆತನನ್ನು ರೌಡಿ ಪಟ್ಟಿಗೆ ಸೇರಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನಾಗರಾಜ್ ಆಲಿಯಾಸ್ ಬಾಂಬ್ ನಾಗ, ರಾಕೇಶ್ ಮಲ್ಲಿ, ಬಿ.ಎಸ್. ಪ್ರಕಾಶ್ ಸೇರಿದಂತೆ 19 ಮಂದಿ ರೌಡಿ ಶೀಟರ್‌ಗಳು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಪೀಠವು ರೌಡಿ ಪಟ್ಟಿ ವಿಚಾರದಲ್ಲಿ ಪೊಲೀಸರು ಮತ್ತು ಇತರ ಇಲಾಖೆಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಹೊರಡಿಸಿದೆ.
ಯಾವುದೇ ಅಪರಾಧ ಕೃತ್ಯದಲ್ಲಿ ಆರೋಪಿಯಾಗದಿದ್ದರೂ ಪೊಲೀಸರು ರೌಡಿ ಶೀಟ್ ತೆಗೆದಿದ್ದಾರೆ. ಇದು ನಮ್ಮ ಮೂಲಭೂತ ಹಕ್ಕಿನ ಚ್ಯುತಿಯಾಗಿದೆ. ನಮ್ಮ ವಿರುದ್ದದ ರೌಡಿ ಶೀಟ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿಯಲ್ಲಿ ಕೋರಿದ್ದರು.
ಒಬ್ಬ ವ್ಯಕ್ತಿಯ ವಿರುದ್ಧ ಎಫ್.ಐ.ಆರ್. ದಾಖಲಾಗದಿದ್ದರೂ, ಅಪರಾಧ ಪ್ರಕರಣದಿಂದ ಖುಲಾಸೆಗೊಂಡರೂ ಅವರ ವಿರುದ್ಧ ರೌಡಿ ಶೀಟ್ ತೆಗೆಯಬಹುದು. 10-20 ವರ್ಷಗಳ ಹಿಂದೆಯೇ ಖುಲಾಸೆಗೊಂಡಿದ್ದಾರೆ ಎಂದ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ಕೈಬಿಡಬೇಕು ಎನ್ನುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು ಒಬ್ಬ ವ್ಯಕ್ತಿಯ ರೌಡಿ ಶೀಟ್ ತೆಗೆಯುವ ತೀರ್ಮಾನಕ್ಕೆ ಬಂದಿರುತ್ತಾರೆ. ರೌಡಿ ಶೀಟ್ ಆರಂಭಿಸಿದ ತಕ್ಷಣ ಅದು ಆ ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲ ಎಂದು ನ್ಯಾಯಪೀಠ ಹೇಳಿದೆ.
ರೌಡಿ ಆದವರು ಮುಂದೆಯೂ ಅಪರಾಧ ಚಟುವಟಿಕೆಯಲ್ಲಿ ತೊಡಗುವ ಸಾಧ್ಯತೆ ಇದೆ. ಅಂಥವರ ಅಪರಾಧ ಕೃತ್ಯಗಳ ಮೇಲೆ ನಿಗಾಯಿಡಲು ‘ರೌಡಿ ಶೀಟ್’ ವ್ಯವಸ್ಥೆ ಇರುತ್ತದೆ. ಹಾಗಾಗಿ, ಇದು ನ್ಯಾಯಸಮ್ಮತವಾದ ನಿರ್ಬಂಧ ಎಂದು ಹೈಕೋರ್ಟ್ ಸಮರ್ಥಿಸಿದೆ.
ಕಾನೂನು ರೂಪಿಸುವ ವರೆಗೆ ಮಾರ್ಗಸೂಚಿ:
- ‘ರೌಡಿ ಶೀಟ್’ನಿಂದ ಹೆಸರು ತೆಗೆಯುವ ಮತ್ತು ಸೇರಿಸುವ ವಿಚಾರಗಳ ಬಗ್ಗೆ ಶಾಸಕಾಂಗ ವಿಸ್ತೃತ ಕಾನೂನು ರಚಿಸಬೇಕು.
- ಸರ್ಕಾರ ಸಮಗ್ರ ಕಾನೂನು ರೂಪಿಸುವ ತನಕ ಪೊಲೀಸ್ ಇಲಾಖೆ ಈ ಮಾರ್ಗಸೂಚಿಗಳನ್ನು ಪಾಲಿಸಬೇಕು.
- ನಾಗರಿಕ ಸಮಾಜದಲ್ಲಿ ರೌಡಿ ಚಟುವಟಿಕೆಗಳಿಗೆ ಅವಕಾಶ ಇರಬಾರದು.
- ರೌಡಿಗಳನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.
ರೌಡಿಶೀಟ್ ಕುರಿತು ಹೈಕೋರ್ಟ್ ರೂಪಿಸಿದ ಮಾರ್ಗಸೂಚಿ ಹೀಗಿದೆ:
- ಎಫ್.ಐ.ಆರ್ ಇಲ್ಲದಿದ್ದರೂ, ಅಪರಾಧ ಪ್ರಕರಣದಿಂದ ಖುಲಾಸೆಗೊಂಡರೂ ಗುಪ್ತಚರ ವರದಿ ಹಾಗೂ ಖಚಿತ ಮಾಹಿತಿ ಇದ್ದಲ್ಲಿ ಅಂಥವರ ರೌಡಿ ಶೀಟ್ ತೆರೆಯಬಹುದು.
- ‘ರೌಡಿ ಶೀಟ್’ ತೆರೆಯುವ ಮುನ್ನ, ಬಾಧಿತ ವ್ಯಕ್ತಿಗೆ (ರೌಡಿಗೆ) ಮುಂಚಿತವಾಗಿ ನೋಟಿಸ್ ಮೂಲಕ ಮಾಹಿತಿ ನೀಡಬೇಕು.
- ‘ರೌಡಿ ಶೀಟ್’ ತೆರೆಯದಂತೆ ಮನವಿ ಸಲ್ಲಿಸಲು ಬಾಧಿತ ವ್ಯಕ್ತಿಗೆ ಸಾಕಷ್ಟು ಅವಕಾಶ ನೀಡಬೇಕು.
- ‘ರೌಡಿ ಶೀಟ್’ ತೆರೆಯುವಾಗ ಯಾ ಮುಂದುವರಿಸುವಾಗ ಸೂಕ್ತ ಕಾರಣ ನೀಡಿ ಲಿಖಿತ ಆದೇಶ ನೀಡಬೇಕು.
- ನಗರದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಜಿಲ್ಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯವರು ರೌಡಿ ಶೀಟ್ ತೆರೆಯಲು ಲಿಖಿತ ಆದೇಶ ಹೊರಡಿಸಬೇಕು.
- 2 ವರ್ಷಕ್ಕೊಮ್ಮೆ ಲಿಖಿತ ಆದೇಶದೊಂದಿಗೆ ರೌಡಿ ಶೀಟ್ ಮರು ಪರಿಶೀಲಿಸಬೇಕು.
- ರೌಡಿ ಶೀಟ್ ತೆರೆದ ನಂತರ, ಬಾಧಿತ ವ್ಯಕ್ತಿಗೆ ತಕರಾರು ಇದ್ದಲ್ಲಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದಿದೆ.