ಚಿಕ್ಕಮಗಳೂರು: ಹೃದಯಾಘಾತದಿಂದ 7ನೇ ತರಗತಿ ಬಾಲಕ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಮೃತ ಬಾಲಕನನ್ನು 12 ವರ್ಷದ ಸೋಹನ್ ರಾಮ್ ಎಂದು ಗುರುತಿಸಲಾಗಿದೆ. ಪಟ್ಟಣದ ಮೆಸ್ಕಾಂ ಕಚೇರಿ ಬಳಿ ಸೈಕಲ್ ಓಡಿಸುತ್ತಿದ್ದ ವೇಳೆ ಬಾಲಕ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದು, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಮೃತ ಬಾಲಕ ನಗರದ ಡಿಸಿಎಂಸಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದನು. ಸೋಹನ್ ರಾಮ್ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪ್ರಸನ್ನ ಹಾಗೂ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿ ರೂಪ ದಂಪತಿಯ ಪುತ್ರ. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಸುದ್ದಿ ಕೇಳಿ 12 ವರ್ಷದ ಬಾಲಕ ಜಗತ್ತಿನ ಅರಿವೇ ಇಲ್ಲದ ಚಿಕ್ಕ ವಯಸ್ಸಿಗೆ ಹೃದಯಾಘಾತದಿಂದ ಹೇಗೆ ಸಾವನ್ನಪ್ಪಿದನೋ ಎಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.