ಕೊಲಂಬೊ: ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಕಳೆದ ಮಂಗಳವಾರ ಬಂಧಿಸಿದ್ದ ಎಲ್ಲಾ 54 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಿಡುಗಡೆ ಮಾಡಿದೆ ಎಂದು ಭಾರತೀಯ ಅಧಿಕಾರಿಗಳು ಶನಿವಾರ ಖಚಿತಪಡಿಸಿದ್ದಾರೆ. ಬಂಧಿತ 54 ಮೀನುಗಾರರ ಪೈಕಿ 40 ಮಂದಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದ್ದು, ಉಳಿದ 14 ಮೀನುಗಾರರನ್ನು ಇಂದು ಬೆಳಗ್ಗೆ ಬಿಡುಗಡೆ ಮಾಡಲಾಗಿದೆ ಎಂದು ಭಾರತೀಯ ಅಧಿಕೃತ ಮೂಲಗಳು ತಿಳಿಸಿವೆ.
ಮಾ.24 ರಂದು, 14 ಸಿಬ್ಬಂದಿಗಳೊಂದಿಗೆ ದೊಡ್ಡ ಭಾರತೀಯ ಮೀನುಗಾರಿಕಾ ಹಡಗನ್ನು ಜಾಫ್ನಾದ ಕೋವಿಲಾನ್ ಕರಾವಳಿಯಲ್ಲಿ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಲಂಕಾ ನೌಕಾಪಡೆ ಬಂಧಿಸಿತ್ತು. ಇನ್ನು 20 ಸಿಬ್ಬಂದಿಗಳೊಂದಿಗೆ ಇನ್ನೂ ಎರಡು ಭಾರತೀಯ ಮೀನುಗಾರಿಕಾ ಹಡಗುಗಳನ್ನು ಮನ್ನಾರ್‌ನಿಂದ 7 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಪೆನಲೈ ಮತ್ತು ಇರಾನಾಟಿವು ದ್ವೀಪದಿಂದ 5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಬಂಧಿಸಲಾಗಿತ್ತು. ಮುಲ್ಲೈಟಿವಿನಿಂದ 7.5 ಮತ್ತು 8.5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ 20 ಸಿಬ್ಬಂದಿಗಳನ್ನು ಹೊಂದಿರುವ ಇನ್ನೆರಡು ಭಾರತೀಯ ಮೀನುಗಾರಿಕಾ ಹಡಗುಗಳನ್ನು ಬಂಧಿಸಲಾಗಿತ್ತು.