ಮಂಗಳೂರು: ನಗರದ ಕುಲಶೇಖರ ಕಟ್ಟೆಯ ಬಳಿ ಮಾರ್ಚ್ 17ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಇನ್ನೂ ಐದು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಆಕಾಶ್ಭವನ ಶರಣ್ನ ಸಹೋದರ ಧೀರಜ್ ಯಾನೆ ಕುಟ್ಟ ಆಕಾಶಭವನ (26), ಮಧ್ಯಪ್ರದೇಶದ ರಾಜೇಶ್ ಥೋಮರ್ ಯಾನೆ ರಾಜ್ಬೀರ್ (31), ಬಜಪೆ ಆದ್ಯಪಾಡಿಯ ರಾಕೇಶ್ ಕಂಬಳಿ ಯಾನೆ ರಾಕಿ (25), ಎಕ್ಕಾರಿನ ರಾಜೇಶ್ ಆಚಾರ್ಯ (38), ಆಕಾಶಭವನದ ಸಾಗರ್ (23) ಎಂದು ಗುರುತಿಸಲಾಗಿದೆ.
“ಆರೋಪಿಗಳು ಆಕಾಶಭವನದ ಶರಣ್ ಯಾನೆ ರೋಹಿದಾಸ್ನ ಸಹಚರರಾಗಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಶರಣ್ ತನ್ನದೇ ಆದ ಗ್ಯಾಂಗ್ ಕಟ್ಟಿದ್ದ. ಶ್ರೀಮಂತರನ್ನು ಬೆದರಿಸಿ ಹಫ್ತಾ ವಸೂಲಿ ಮಾಡುವುದು, ಹಣಕಾಸಿನ ಡೀಲ್ ಮಾಡುವುದು, ಮಾದಕ ವಸ್ತುಗಳನ್ನು ಸಾಗಿಸುವುದು, ಮರಳು ದಂಧೆಯಲ್ಲಿ ತೊಡಗಿಸಿಕೊಳ್ಳುವುದು ಮುಂತಾದ ಅಕ್ರಮ ಚಟುವಟಿಕೆಗಳ ಮೂಲಕ ಹಣ ಗಳಿಸುವ ಉದ್ದೇಶವನ್ನು ಹೊಂದಿದ್ದ. ನಗರದಲ್ಲಿರುವ ಎಲ್ಲಾ ಗ್ಯಾಂಗ್ಗಳು ತನ್ನ ಕೈಕೆಳಗೆ ಇರಬೇಕು ಎಂದು ಆತ ಬಯಸಿದ್ದ. ಹಾಗಾಗಿ ತನ್ನ ಎದುರಾಳಿ ಗ್ಯಾಂಗ್ ಅನ್ನು ಮಟ್ಟಹಾಕಲು ತೀರ್ಮಾನ ಮಾಡಿದ್ದ. ನಗರದಲ್ಲಿನ ಇನ್ನೊಂದು ಕ್ರಿಮಿನಲ್ ಗ್ಯಾಂಗ್ನಲ್ಲಿ ಸಕ್ರಿಯರಾಗಿರುವ ಪ್ರದೀಪ್ ಮೆಂಡನ್, ಮಂಕಿ ಸ್ಟ್ಯಾಂಡ್ ವಿಜಯಾ, ಗೌರೀಶ್ ಯಾನೆ ಗೌರಿ ಅವರ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ” ಎಂದು ಪೊಲೀಸರು ಹೇಳಿದ್ದಾರೆ.
“ಈ ಗ್ಯಾಂಗ್ಗೆ ರಾಜೇಶ್ ಥೋಮರ್ ಮಾರಕಾಸ್ತ್ರ ಪೂರೈಕೆ ಮಾಡಿದ್ದು, ಈತನು 2016ಲ್ಲಿ ಕಟೀಲಿನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಯೂ ಆಗಿದ್ದಾನೆ. ರಾಕೇಶ್ ಕಂಬಳಿಯ ಮೇಲೆ ಮಣಿಪಾಲ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ ಆಚಾರ್ಯನ ಮೇಲೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು” ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.
ಇದೇ ಪ್ರಕರಣ ಸಂಬಂಧಿಸಿದಂತೆ ಈ ಹಿಂದೆ ದೀಕ್ಷಿತ್ ಯಾನೆ ದೀಕ್ಷು ಕುಂಡಕೋರಿ ಯಾನೆ ದೀಕ್ಷಿತ್ ಪೂಜಾರಿ, ಚಂದ್ರ ಯಾನೆ ಚಂದ್ರಹಾಸ ಪೂಜಾರಿ, ಪ್ರಜ್ವಲ್ ಯಾನೆ ಹೇಮಚಂದ್ರ, ಸಂತೋಷ್ ಪೂಜಾರಿ ಯಾನೆ ನಾಯಿ ಸಂತು ಅವರನ್ನು ಬಂಧಿಸಲಾಗಿತ್ತು.