ಪುತ್ತೂರು: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿ ‘ರೈತ ಸೌಧ’ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಸೆ.24 ರಂದು ನಡೆಯಲಿದೆ.

84 ವರ್ಷಗಳ ಹಿಂದೆ ಪ್ರಾರಂಭವಾಗಿ ತನ್ನ ಸದಸ್ಯರ ಬಾಳು ಬೆಳಗುವಲ್ಲಿ ಗಮನಾರ್ಹ ಸೇವೆ ಸಲ್ಲಿಸಿ, ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸ್ವಾತಂತ್ರ್ಯ ಪೂರ್ವದಲ್ಲಿ ಬಡ ಕೃಷಿಕರ ಸ್ಧಿತಿ ಶೋಚನೀಯವಾಗಿದ್ದು, ಸ್ಧಿತಿವಂತ ಭೂಮಾಲಿಕರ ಕಪಿಮುಷ್ಠಿಯಿಂದ ಹೊರಬರಲು ಸಾದ್ಯವಾಗದೆ ಬಳಲುತ್ತಿರುವ ಆ ಸಂದ್ಧಿಗ್ಧ ಸ್ಥಿತಿಯಲ್ಲಿ ದುರ್ಬಲರ ಬಾಳಿಗೆ ಹೊಸ ಬೆಳಕಾಗಿ ಈ ಸಂಸ್ಥೆಯ ಉದಯ. ದ.ಕ.ಜಿಲ್ಲೆಯ ಸಹಕಾರಿ ಪಿತಾಮಹರಾದ ಮೊಳಹಳ್ಳಿ ಶಿವರಾಯರು ಪ್ರವರ್ತಕರಾಗಿ, ಅಧ್ಯಕ್ಷರಾಗಿ, ಪುತ್ತೂರು ಡಿವಿಜನ್ ಸಹಕಾರಿ ಭೂಮಿ ಅಡವಿನ ಬ್ಯಾಂಕ್ ಎಂಬುದಾಗಿ 01-05-1938 ರಲ್ಲಿ ನೋಂದಣಿಯಾಗಿ ಪ್ರಾರಂಭಗೊಂಡಿತು.
ಅದೇ ವರ್ಷ ಮಂಗಳೂರು ಮತ್ತು ಉಡುಪಿಯಲ್ಲಿ ಭೂ ಅಡಮಾನ ಬ್ಯಾಂಕ್‌ಗಳನ್ನು ತೆರೆದು ಪೂರ್ಣ ಜಿಲ್ಲೆಯನ್ನು ಅಡಮಾನ ಕಾರ್ಯವ್ಯಾಪ್ತಿಗೆ ತಂದರು.
ಪ್ರಾರಂಭದಲ್ಲಿ ಈ ಬ್ಯಾಂಕ್ ಆರ್ಥಿಕ ಮುಗ್ಗಟ್ಟಿನಲ್ಲಿ ರೈತರಿಗೆ ಖಾಸಗಿ ವ್ಯಕ್ತಿಗಳಿಂದ ಪಡೆದ ಹಳೇ ಸಾಲವನ್ನು ತಿರುವಳಿ ಮಾಡಲು ಸಾಲವನ್ನು ಮಂಜೂರು ಮಾಡಲಾಗುತ್ತಿತ್ತು. 1964 ರಲ್ಲಿ ಸಹಕಾರ ಕಾಯ್ದೆಯಲ್ಲಿ ಹೊಸ ತಿದ್ದುಪಡಿಯಾಗಿ ಸಾಲ ವಿತರಣೆಯಲ್ಲಿ ಅವಶ್ಯಕ ಬದಲಾವಣೆ ಕಂಡು ಬಂತು. ಕೃಷಿಕರಿಗೆ ಸಾಲ ವಿತರಣೆ ಯಾದರೆ ಸಾಲದು, ಪಡೆದ ಸಾಲದಿಂದ ಅಭಿವೃದ್ಧಿಯಾಗಬೇಕು, ಅಭಿವೃದ್ಧಿಯಾಗಬೇಕಾದರೆ ಸಾಲದಿಂದ ಕೃಷಿಕರು ಜಮೀನಿನಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂಬ ಉದ್ದೇಶದಿಂದ ಸಾಲ ನೀಡುವಂತ ವ್ಯವಸ್ಧೆ ಆರಂಭಗೊಂಡಾಗ ಭೂ ಅಭಿವೃದ್ಧಿ ಬ್ಯಾಂಕ್ ಎನ್ನುವ ಹೆಸರಿನಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ. ಕೇವಲ ಕೃಷಿ ಅಭಿವೃದ್ಧಿಯಾದರೆ ಸಾಲದು , ಕೃಷಿಗೆ ಪೂರಕ ಕೃಷಿಯೇತರ, ಮುಂತಾದ ಸಾಲವನ್ನು ನೀಡಿ ಸರ್ವ ವಿಧದಲ್ಲೂ ಗ್ರಾಮೀಣ ಅಭಿವೃದ್ಧಿಯಾಗುವಂತೆ ಸಾಲ ನೀಡುವುದು ಅಗತ್ಯವೆಂದು ಮನಗೊಂಡು ನಬಾರ್ಡ್ ಸಂಸ್ಥೆಯಿಂದ ಸಾಲ ನೀಡುವ ಯೋಜನೆಗಳು ಅನುಷ್ಠಾನಗೊಂಡಿದ್ದು. ಈ ಸಂದರ್ಭದಲ್ಲಿ ಭೂ ಅಭಿವೃದ್ಧಿ ಬ್ಯಾಂಕ್‌ಗಳು ತಮ್ಮ ಹೆಸರನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಎಂದು ಬದಲಾಯಿಸಿಕೊಂಡು ಕಾರ್ಯ ನಿರ್ವಹಿಸುತ್ತಾ ಬಂದಿದೆ .
ಪ್ರಸ್ತುತ ಬ್ಯಾಂಕ್ ತಾಲೂಕಿನ ರೈತ ಸದಸ್ಯರುಗಳಿಗೆ ತಮ್ಮ ಕೃಷಿ ಜಮೀನಿನಲ್ಲಿ ಸಣ್ಣ ನೀರಾವರಿ ಯೋಜನೆಗಳಾದ ಹೊಸ ನೀರಾವರಿ, ತುಂತುರು ನೀರಾವರಿ, ನೀರು ಶೇಖರಣಾ ತೊಟ್ಟಿ, ತೋಟದ ಕೆರೆ . ಪೈಪ್ ಲೈನ್ , ಬಾವಿ ಆಳಪಡಿಸುವಿಕೆ, ವಿಶೇಷ ಯೋಜನೆಗಳಾದ ಅಡಿಕೆ , ತೆಂಗು ತೋಟ ಅಭಿವೃದ್ಧಿಗೆ, ಅಡಿಕೆ ಒಣಗಿಸುವ ಕಣ ರಚೆನೆಗೆ, ರಬ್ಬರ್ ಸಂಸ್ಕರಣಾ ಫಟಕಗಳಿಗೆ, ತೋಟಗಾರಿಕೆ ಸಂಬಂಧಿಸಿದಂತೆ ಹೊಸ ರಬ್ಬರ್ ತೋಟ,ಗೇರು ತೋಟ, ತೆಂಗು ತೋಟ ನಿರ್ಮಾಣಕ್ಕೆ, ವ್ಯೆವಿಧ್ಯಮಯ ಯೋಜನೆಗಳಲ್ಲಿ ದ್ವಿಚಕ್ರ ವಾಹನ ಖರೀದಿ, ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿ ಸಾಕಣೆ, ಹಾಗೂ ರೈತರಿಗೆ ಕೃಷಿಯೇತರ ಯೋಜನೆಗಳಲ್ಲಿ ಸಣ್ಣ ಉದ್ದಿಮೆ, ಸೇವಾ ಚಟುವಟಿಕೆಗಳಿಗೆ, ನಬಾರ್ಡ್ ಮೂಲದಿಂದ ಕಸ್ಕಾರ್ಡ್ ಬ್ಯಾಂಕಿನ ಮೂಲಕ ಆರ್ಥಿಕ ನೆರವನ್ನು ಪಡೆದು ದೀರ್ಘಾವಧಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಕರ್ನಾಟಕ ಸರಕಾರ ದೀರ್ಘಾವಧಿ ಕೃಷಿ ಹಾಗೂ ಕೃಷಿ ಪೂರಕ ಸಾಲಗಳಿಗೆ ಪ್ರಕಟಿಸಿದ ಶೇ.6, ಶೇ.4 ಮತ್ತು ಶೇ.3 ಬಡ್ಡಿ ಸಹಾಯಧನದ ಸಾಲಗಳನ್ನು ಒದಗಿಸಿ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಕಳೆದ ದಶಕಗಳಿಂದ ಬ್ಯಾಂಕ್ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಿ, ಸದಸ್ಯರಿಂದ ನಿರಂತರವಾಗಿ ವಿವಿಧ ರೀತಿಯ ಠೇವಣೆಗಳನ್ನು ಸಂಗ್ರಹಿಸುತ್ತಾ ಅವರಲ್ಲಿ ಉಳಿತಾಯದ ಮನೋಭಾವನೆ ಬೆಳಸುವುದರ ಮೂಲಕ ,ಬ್ಯಾಂಕ್ ತನ್ನ ಸ್ವಂತ ಸಂಪನ್ಮೂಲಗಳನ್ನು ವೃದ್ಧಿಗೊಳಿಸಿ ರೈತರಿಗೆ ಕೃಷಿ, ಕೃಷಿ ಪೂರಕ ಮತ್ತು ಕೃಷಿಯೇತರ, ಚಿನ್ನಾಭರಣ ಸಾಲ ಸೌಲಭ್ಯಗಳನ್ನು ನೀಡಿ,ಗ್ರಾಮೀಣ ರೈತ ಜನರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿರುವ ಕಡಬ ವಲಯ ಹಾಗೂ ಬಿಳಿನೆಲೆ ವಲಯಗಳ ಸದಸ್ಯರುಗಳಿಗೆ ಉತ್ತಮ ಹಾಗೂ ತ್ವರಿತ ಬ್ಯಾಂಕಿಂಗ್ ಸೇವೆಯನ್ನು ನೀಡುವ ದೃಷ್ಟಿಯನ್ನು ಇರಿಸಿಕೊಂಡು ಕಡಬ ಪಟ್ಟಣದ ಭಾಗೀರಥಿ ರ‍್ಸ್ ನಲ್ಲಿ ಶಾಖೆ ಕಾರ್ಯ ನಿರ್ವಹಿಸುತ್ತಿದೆ.
2013 ಡಿ.21 ರಂದು ನಡೆದ ಬ್ಯಾಂಕಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಬ್ಯಾಂಕಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ರಾಜ್ಯದ ಅಂದಿನ ಗೌರವಾನ್ವಿತ ಸಹಕಾರ ಸಚಿವರಾಗಿದ್ದ ದಿ. ಎಚ್.ಎಸ್. ಮಹಾದೇವ ಪ್ರಸಾದ್ ಅವರು ನೇರವೇರಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ ಅಧಿಕೃತ ಚಾಲನೆ ನೀಡಿರುತ್ತಾರೆ. ಅಮೃತ ಮಹೋತ್ಸವದ ಸಂದರ್ಭ ಹಿರಿಯ ಸಹಕಾರಿಗಳಾದ ರಂಗನಾಥ ರೈ ಕೆ.ಎಸ್. ರವರು ಬ್ಯಾಂಕಿನ ಅಧ್ಯಕ್ಷರಾಗಿದ್ದರು.
ಪುತ್ತೂರು ಪಟ್ಟಣದ ಮೊಳಹಳ್ಳಿ ಶಿವರಾವ್ ರಸ್ತೆಯ ಸಮೀಪ ಇರುವ ಬ್ಯಾಂಕಿನ ಸ್ವಂತ ನಿವೇಶನದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಹಾಗೂ ಬ್ಯಾಂಕಿನ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಎರಡು ಕೋಟಿ ಇಪ್ಪತ್ತು ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿ ಹಾಗೂ ನೀಲ ನಕಾಶೆ ತಯಾರಿಸಿ ಎರಡು ಅಂತಸ್ತಿನ 9675 ಚ.ಅಡಿಯ ಕಟ್ಟಡ ನಿರ್ಮಿಸಲು, 2017ನೇ ಇಸವಿಯಲ್ಲಿ ಸಹಕಾರ ಇಲಾಖೆಯಿಂದ ಆಡಳಿತಾತ್ಮಕ ಅನುಮತಿ ಪಡೆದು, ಕಾಮಗಾರಿಯನ್ನು ಇ-ಟೆಂಡರ್ ಮೂಲಕ ಪ್ರಸಾದ್ ಕೆ.ಎನ್ ಇವರಿಗೆ ಕಂಟ್ರಾಕ್ಟ್ ನೀಡಿ, ಕಟ್ಟಡ ಕಾಮಗಾರಿಯ ಸಿವಿಲ್ ಇಂಜಿನಿಯರ್ ರವೀಂದ್ರ ರವರು ಆಗಿರುತ್ತಾರೆ.
ಬ್ಯಾಂಕ್‌ನ ಸುಸಜ್ಜಿತ ನೂತನ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿ ಕಟ್ಟಡದ ಬೇಸ್ ಮೆಂಟ್‌ನಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ನೆಲ ಅಂತಸ್ತಿನಲ್ಲಿ ತಲಾ 300 ಚ.ಅಡಿಯ ಅಳತೆಯ 5 ವಾಣಿಜ್ಯ ಕೊಠಡಿಗಳು, ಮೊದಲನೆ ಮಹಡಿಯಲ್ಲಿ ಬ್ಯಾಂಕಿನ ನೂತನ ಕಛೇರಿ ಹಾಗೂ ಎರಡನೇ ಮಹಡಿಯಲ್ಲಿ 6 ವಾಣಿಜ್ಯ ಕೊಠಡಿಗಳು, ಬ್ಯಾಂಕ್ ಆಡಳಿತ ಮಂಡಳಿ ಸಭೆಯ ಹಾಲ್ , ಅತಿಥಿ ಗೃಹ ಹೊಂದಿರುತ್ತದೆ. ನೂತನ ಕಟ್ಟಡಕ್ಕೆ “ರೈತ ಸೌಧ” ಎಂದು ನಾಮಕರಣ ಮಾಡಲಾಗಿದ್ದು, ಲಿಫ್ಟ್ ಹಾಗೂ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.
ಅತಿಥಿ ಗಣ್ಯರ, ಸಹಕಾರಿಗಳ , ಬ್ಯಾಂಕ್‌ನ ಸದಸ್ಯರುಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದೆ. ಸಭಾ ಕಾರ್ಯಕ್ರಮವು ಪುತ್ತೂರು ಕಿಲ್ಲೆ ಮೈದಾನದಲ್ಲಿ ಶಾಸಕ ಸಂಜೀವ ಮಠಂದೂರು ರವರ ಸಭಾಧ್ಯಕ್ಷತೆಯಲ್ಲಿ, ಸಚಿವರು, ಸಂಸದರು ಹಾಗೂ ಅತಿಥಿ ಗಣ್ಯರ , ಸಹಕಾರಿಗಳ, ಸದಸ್ಯರುಗಳ ಉಪಸ್ಥತಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.