ಉಪ್ಪಿನಂಗಡಿ : ಉಳ್ಳಾಲ ಪಬ್ ಜಿ ಗೇಮ್ ಗೆ ಅಮಾಯಕ ಬಾಲಕನೋರ್ವ ಬಲಿಯಾದ ಸುದ್ಧಿ ಮಾಸುವ ಮುನ್ನವೇ ಉಪ್ಪಿನಂಗಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಪಬ್ ಜಿ ಪೈಯರ್ ಗೇಮ್ ಆಡಿಕೊಂಡು ತಲೆಕೂದಲು ಕತ್ತರಿಸಿಕೊಂಡ ಘಟನೆ ಪತ್ತೆಯಾಗಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.
ಇಲ್ಲಿನ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯೋರ್ವನ ತಲೆಕೂದಲನ್ನು ವಿಕಾರವಾಗಿ ತೆಗೆಯಲಾಗಿರುವುದನ್ನು ಆತನ ಹೆತ್ತವರು ಗಮನಿಸಿ ಆತನನ್ನು ಪ್ರಶ್ನಿಸಿದ್ದಾರೆ. ಮೊದ ಮೊದಲು ಅನ್ಯಕೋಮಿನ ಹುಡುಗರ ಹೆಸರನ್ನು ಹೇಳತೊಡಗಿದ ಈತ ಸುಳ್ಳು ಕತೆಯನ್ನು ಹೆಣೆಯಲು ಹೋಗಿ ಪರಿಶೀಲನೆ ವೇಳೆ ಸಿಕ್ಕಿ ಬೀಳುತ್ತಿದ್ದ, ಈತನನ್ನು ಮನೆಯಲ್ಲಿ ಹೆತ್ತವರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟ ಈತ, ತಾನೇ ಪಬ್ ಜೀ ಆಟವಾಡುತ್ತಾ ಫ್ರೀ ಪೈಯರ್ ಆಟದಡಿ ಮೊಬೈಲ್ ಮುಂಭಾಗದಲ್ಲಿ ತಲೆ ಕೂದಲು ತೆಗೆದಿರುವುದಾಗಿ ತಿಳಿಸಿದ್ದಾನೆ.
ವಿದ್ಯಾರ್ಥಿಯ ಈ ಕೃತ್ಯಕ್ಕೆ ಕಂಗೆಟ್ಟ ಪೋಷಕರು ಈ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದಾಗ, ಈ ಕ್ರೀಡೆಯ ಹಿಂದೆ ಇನ್ನಷ್ಟು ಮಕ್ಕಳು ಭಾಗಿಯಾಗಿರುವುದು ಕಂಡು ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈ ಆಟದಲ್ಲಿ ಭಾಗಿಯಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಈ ಮಧ್ಯೆ ವಿದ್ಯಾರ್ಥಿಗಳ ಈ ಹುಚ್ಚಾಟ್ಟಕ್ಕೆ ಆನ್ ಲೈನ್ ಶಿಕ್ಷಣದ ಕಾರಣ ಅವರಿಗೆ ದೊರೆತ ಮೊಬೈಲ್ ಗಳೇ ಕಾರಣವೆಂದು ಆರೋಪಿಸಿದ ಪೋಷಕರೊಬ್ಬರು ಕೊರೊನಾ ವೈರಸ್ ತಗುಲಿದರೂ ಚಿಂತಿಲ್ಲ, ದಯವಿಟ್ಟು ಶಾಲೆಯಲ್ಲೇ ಶಿಕ್ಷಣ ಕೊಡಿಸಿ, ಮೊಬೈಲ್ ನಿಂದ ಮಕ್ಕಳನ್ನು ಸಾಯುವಂತೆ ಮಾಡಬಾರದೆಂದು ಠಾಣೆಯ ಮುಂದೆಯೇ ಬೊಬ್ಬಿರಿಸುತ್ತಿದ್ದದ್ದು ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸುವಂತಿತ್ತು.