ಹಿಂದಿನ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ಹಾಕಿದ್ದ ಸುಳ್ಳು ಕೇಸುಗಳನ್ನು ವಾಪಸ್ ಪಡೆದ ಸರ್ಕಾರದ ಕ್ರಮವನ್ನು ಹಿಂದೂ ಜಾಗರಣ ವೇದಿಕೆ ಸ್ವಾಗತಿಸಿದ್ದು, ಇನ್ನೂ ಇಂತಹ ಅನೇಕ ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದೆ.
ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಮೂಲಕ ಬಿಜೆಪಿ ಸರ್ಕಾರವು ಅಮಾಯಕ, ನಿರಪರಾಧಿ ಹಿಂದೂ ಸಾಮಾಜಿಕ ಕಾರ್ಯಕರ್ತರಿಗೆ ನ್ಯಾಯವನ್ನು ದೊರಕಿಸಿಕೊಡುವ ನಿರ್ಧಾರ ಕೈಗೊಂಡಿರುವುದನ್ನು ಕರ್ನಾಟಕ ಹಿಂದೂ ಜಾಗರಣ ವೇದಿಕೆ ಸಂತಸ ವ್ಯಕ್ತಪಡಿಸಿದೆ. ರಾಜ್ಯಾದ್ಯಂತ ಇನ್ನಷ್ಟು ಇಂತಹ ಅನ್ಯಾಯದ ಕೃತ್ಯಗಳು ನಡೆದಿದ್ದು, ಅವುಗಳೆಲ್ಲವನ್ನು ಶೀಘ್ರವಾಗಿ ಸರ್ಕಾರ ಹಿಂದಕ್ಕೆ ಪಡೆದು ಉಳಿದಿರುವ ಸಾವಿರಾರು ಕಾರ್ಯಕರ್ತರಿಗೆ ನ್ಯಾಯ ದೊರಕಿಸಬೇಕೆಂದು ಹಿಂದೂ ಜಾಗರಣ ವೇದಿಕೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಹಿಂದೂ ಮುಖಂಡ ಜಗದೀಶ ಕಾರಂತರ ಮೇಲೆ ದಾಖಲಿಸಿದ್ದ ಬಹುತೇಕ ಪ್ರಕರಣಗಳನ್ನು ಈ ಹಿಂದೆಯೇ ಕರ್ನಾಟಕ ಉಚ್ಚ ನ್ಯಾಯಾಲಯವು ವಜಾ ಗೊಳಿಸಿದ್ದು, ಹಿಂದಿನ ಸರ್ಕಾರದ ಅನ್ಯಾಯದ ಕ್ರಮವನ್ನು ಅನೂರ್ಜಿತಗೊಳಿಸಿ ಸರ್ಕಾರಕ್ಕೆ ಕಪಾಳ ಮೋಕ್ಷವನ್ನೇ ನೀಡಿದೆ ಎಂದು ಹಿಂದೂ ಜಾಗರಣ ವೇದಿಕೆ ಹೇಳಿದೆ.