ಮಲ್ಪೆ: ಈಜಲೆಂದು ನೀರಿಗೆ ಇಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೂಡೆ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ನಿನ್ನೆ ಸಂಜೆ ಸಂಭವಿಸಿದ್ದು, ನಾಪತ್ತೆಯಾಗಿದ್ದ ವಿದ್ಯಾರ್ಥಿ ಹೈದರಬಾದ್ -ನ ಶ್ರೀಕರ ಅವರ ಮೃತದೇಹವೂ ಇಂದು ಪತ್ತೆಯಾಗಿದೆ.
ಮೃತರನ್ನು ಬೆಂಗಳೂರಿನ ಷಣ್ಮುಖ (19), ನಿಶಾಂತ್ (19) ಹೈದರಬಾದ್ ನ ಶ್ರೀಕರ (19) ಎಂದು ಗುರುತಿಸಲಾಗಿದೆ.
ವಾರಾಂತ್ಯ ಹಿನ್ನಲೆಯಲ್ಲಿ ಮಣಿಪಾಲದ ಕಾಲೇಜಿನ 15 ವಿದ್ಯಾರ್ಥಿಗಳ ತಂಡ ಬೀಚ್ ಗೆ ತೆರಳಿತ್ತು. ಸಮುದ್ರದಲ್ಲಿ ನೀರಿನಲ್ಲಿ ಎಲ್ಲರೂ ನೀರಾಟವಾಡುತ್ತಿದ್ದರು. ಈ ವೇಳೆ ಮೂವರು ಖಾಸಗಿ ಗೆಸ್ಟ್ ಹೌಸ್ ಸಮೀಪದವರೆಗೂ ಈಜುತ್ತಾ ಹೋಗಿದ್ದು, ಅಷ್ಟರಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಇಬ್ಬರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಸಾವನ್ನಪ್ಪಿದ್ದರು. ಇನ್ನು ನಾಪತ್ತೆಯಾಗಿದ್ದ ವಿದ್ಯಾರ್ಥಿ ಶ್ರೀಕರ್ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.