ಮಲ್ಪೆ: ಆಭರಣ ತಯಾರಿಕ ಘಟಕದ ಬೀಗ ಮುರಿದು ಒಳನುಗ್ಗಿದ ಕಳ್ಳರು 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಕೆಳಾರ್ಕಳಬೆಟ್ಟುವಿನಲ್ಲಿ ನಡೆದಿದೆ.
ಚಿನ್ನಾಭರಣ ತಯಾರಿಕಾ ಘಟಕದ ವ್ಯವಸ್ಥಾಪಕ ದೀಪಕ್ ರಾಮದಾಸ್ ನಾಯಕ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ನ.25 ರಂದು ಬೆಳಿಗ್ಗೆ ಕಂಪನಿಯಲ್ಲಿ ಕೆಲಸ ಮಾಡುವ ಮಂಗಳದೀಪ್ ಮೊಂಡಲ್ ಎಂಬುವರಿಂದ ಕರೆ ಬಂದಿದ್ದು, ಆಭರಣ ತಯಾರಿಕ ಘಟಕದ ಬೀಗವನ್ನು ಯಾರೋ ಒಡೆದು ಒಳ ಪ್ರವೇಶಿಸಿದ್ದಾರೆ ಎಂದು ಹೇಳಿದ್ದಾರೆ. ಆಭರಣ ತಯಾರಿಸಲು ಇಟ್ಟಿದ್ದ ಚಿನ್ನ ಹಾಗೂ ಅರ್ಧ ತಯಾರಿಸಿದ ನೆಕ್ಲೆಸ್ ಹಾಗೂ ಮೇಣದಲ್ಲಿ ಇರಿಸಿದ ಚಿನ್ನ ಹೀಗೆ ಒಟ್ಟು ತೂಕ 126 ಗ್ರಾಂ ತೂಕದ ಚಿನ್ನ ಕಳವು ಆಗಿದ್ದು, ಇದರ ಮೌಲ್ಯ 6.30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.