ಸುಬ್ರಹ್ಮಣ್ಯ: ಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನೋರ್ವನಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿ, ಯುವಕನನ್ನು ಪೊಲೀಸ್ ವಸತಿಗೃಹಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿದ್ದು, ಈ ವಿಚಾರ ಗಂಭೀರವಾಗಿ ಪರಿಗಣಿಸಿದ ಹಿಂದೂ ಜಾಗರಣ ವೇದಿಕೆ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿತ್ತು. ಹಿಂದೂ ಜಾಗರಣ ವೇದಿಕೆ ಆಗ್ರಹಕ್ಕೆ ಸ್ಪಂದಿಸಿದ ಪೊಲೀಸ್ ಇಲಾಖೆ ಕೊನೆಗೂ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ತಿಳಿದು ಬಂದಿದೆ.
ಕುಟ್ರುಪಾಡಿ ಗ್ರಾಮದ ಬೀಮಗುಂಡಿ ನಿವಾಸಿ ಶಶಿಕಿರಣ್ ಎಂಬ ಯುವಕನಿಗೆ ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಸಿಬ್ಬಂದಿ ಭೀಮಣ್ಣ ಎಂಬವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಯುವಕ ಆಸ್ಪತ್ರೆಗೆ ದಾಖಲಾಗಿದ್ದ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹಿಂದೂ ಜಾಗರಣ ವೇದಿಕೆ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಕ್ರಮ ತೆಗೆದುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಹೇಳಿತ್ತು.
ಈ ಬಗ್ಗೆ ಯುವಕ ನೀಡಿದ ದೂರಿನ್ವಯ ಸುಬ್ರಹ್ಮಣ್ಯ ಠಾಣೆಯಲ್ಲಿ ಐಪಿಸಿ 1860 (u/s- 341, 323, 504, 506) ರಂತೆ ಪ್ರಕರಣ ದಾಖಲಾಗಿದೆ..


























