ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್) ಸೋಮವಾರ (ಫೆ.20 ರಂದು) ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಕನ್ನಡದಲ್ಲಿ ʼಕಸ್ತೂರಿ ನಿವಾಸʼ, ʼಎರಡು ಕನಸುʼ, ʼಬಯಲು ದಾರಿʼ, ʼಜೀವನ ಚೈತ್ರʼ,ʼಗಾಳಿ ಮಾತುʼ, ʼಹೊಸ ಬೆಳಕುʼ, ʼಆಪರೇಷನ್ ಡೈಮಂಡ್ ರಾಕೆಟ್ʼ, ʼಜೇಡರ ಬಲೆʼ, ʼಗೋವಾದಲ್ಲಿ ಸಿಐಡಿ999ʼ, ಹೀಗೆ ಅನೇಕ ಚಿತ್ರಗಳನ್ನು ಮಾಡಿ ಸೂಪರ್ ಹಿಟ್ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು.
ಡಾ. ರಾಜ್ ಕುಮಾರ್ ಅವರೊಂದಿಗೆ ಬಂದ ಭಗವಾನ್ ಅವರ ಸಿನಿಮಾಗಳು ಆ ಕಾಲದಲ್ಲಿ ಮೋಡಿ ಮಾಡಿತ್ತು. 2019 ರಲ್ಲಿ ಸಂಚಾರಿ ವಿಜಯ್ ಅವರ ʼಆಡುವ ಗೊಂಬೆʼ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಇವರ ಸೇವೆಗೆ ದಾದಾಸಾಹೇಬ್ ಫಾಲ್ಕೆ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ 1995-96ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, 2010ರಲ್ಲಿ ರಾಜಕುಮಾರ್ ಸೌಹಾರ್ದ ಪ್ರಶಸ್ತಿ ಒಲಿದು ಬಂದಿತ್ತು. ಹಿರಿಯ ನಿರ್ದೇಶಕ ದೊರೈರಾಜ್ ಹಾಗೂ ಎಸ್.ಕೆ. ಭಗವಾನ್ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧವಾಗಿತ್ತು. ಬೆಂಗಳೂರಿನ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.