ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸೋಷಿಯಲ್ ಮೀಡಿಯಾ ಕಚ್ಚಾಟ ಈಗ ಸರ್ಕಾರದ ಅಂಗಳ ತಲುಪಿದೆ.
ರೋಹಿಣಿ ಮತ್ತು ರೂಪಾ ಇಬ್ಬರೂ ಪರಸ್ಪರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮರಿಗೆ ಸೋಮವಾರ ದೂರು ಕೊಟ್ಟಿದ್ದಾರೆ. ಇದೀಗ ಸರ್ಕಾರದ ನಡೆ ಭಾರೀ ಕುತೂಹಲ ಮೂಡಿಸಿದೆ.
ಭಾನುವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಚ್ಚಾಡುತ್ತಿರುವ ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಪ್ರಕರಣ ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಎದುರು ನ್ಯಾಯ ಪಂಚಾಯಿತಿಗೆ ಬಂದಿದೆ. ಸೋಮವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿ ಮಾಡಿದ ರೋಹಿಣಿ ಸಿಂಧೂರಿ, ರೂಪಾ ಮೌದ್ಗಿಲ್ ವಿರುದ್ಧ ಲಿಖಿತ ದೂರು ಕೊಟ್ಟಿದ್ದಾರೆ.
ಮೂರು ಪುಟಗಳ ದೂರಿನಲ್ಲಿ ರೋಹಿಣಿ ಅವರು, ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳ ಮೂಲಕ ರೂಪಾ ಅವರು ವೈಯಕ್ತಿಕ ತೇಜೋವಧೆ ಮಾಡಿದ್ದಾರೆ. ಹೆಚ್ಚಾಗಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ರೂಪಾ ಅವರು ಸೇವಾ ನಿಯಮಯಗಳನ್ನು ಉಲ್ಲಂಘಿಸಿದ್ದು, ಅಖಿಲ ಭಾರತೀಯ ಸೇವಾ ನಿಯಮಗಳಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಮೈಸೂರು ಡಿಸಿ ಆಗಿದ್ದಾಗಿನ ಆರೋಪಗಳು, ಮಂಡ್ಯ ಸಿಇಒ ತಮ್ಮ ದೂರಿನ ಜತೆಗೆ ರೂಪಾ ಅವರ ಆರೋಪಗಳಿರುವ ಟ್ವಿಟ್ಟರ್, ಫೇಸ್‌ಬುಕ್, ಯೂಟ್ಯೂಬ್, ಮಾಧ್ಯಮ ಸುದ್ದಿ ಪ್ರಸಾರದ ಲಿಂಕ್‌ಗಳನ್ನು ರೋಹಿಣಿ ಸಲ್ಲಿಸಿದ್ದಾರೆ.
ಸಿಎಸ್ ಅವರಿಗೆ ದೂರು ಕೊಟ್ಟ ಬಳಿಕ ಮಾತಾಡಿದ ರೋಹಿಣಿ ಸಿಂಧೂರಿ, ರೂಪಾ ಅವರು ಮಾಡಿರುವ ಆರೋಪಗಳು ಸುಳ್ಳಿನಿಂದ ಕೂಡಿವೆ. ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ರೂಪಾ ಮಾಡಿರುವ ವೈಯಕ್ತಿಕ ಆರೋಪದ ಬಗ್ಗೆ ನನ್ನ ಗಂಡ ಮಾತನಾಡಿದ್ದಾರೆ. ಯಾವತ್ತೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪಗಳನ್ನು ಮಾಡಬಾರದು. ಸದ್ಯ ಏನೆಲ್ಲಾ ಬೆಳವಣಿಗೆ ನಡೆಯುತ್ತಿದೆ ಎಂಬುದನ್ನು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ತಿಳಿಸಿದ್ದೇನೆ. ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಮಾಧ್ಯಮದ ಮುಂದೆ ಮಾತನಾಡಬಾರದು. ಹೀಗಾಗಿ ನಾನು ಮಾಧ್ಯಮಗಳ ಮುಂದೆ ಬಂದು ಯಾವುದೇ ಹೇಳಿಕೆ ನೀಡಲಿಲ್ಲ. ನಾನು ಪುರುಷ ಐಎಎಸ್ ಅಧಿಕಾರಿಗಳಿಗೆ ಕೆಲ ಫೋಟೋಗಳನ್ನು ಕಳುಹಿಸಿದ್ದೇನೆ ಎಂದು ರೂಪಾ ಆರೋಪ ಮಾಡಿದ್ದಾರೆ. ಮೊದಲು ಆ ಮೂರು ಜನ ಅಧಿಕಾರಿಗಳು ಯಾರೆಂದು ಹೇಳಲಿ ಎಂದು ರೋಹಿಣಿ ಸಿಂಧೂರಿ ಸವಾಲು ಎಸೆದಿದ್ದಾರೆ.
ಇತ್ತ ಐಪಿಎಸ್ ಅಧಿಕಾರಿ ಡಿ.ರೂಪಾ ಸಹ ರೋಹಿಣಿ ಸಿಂಧೂರಿ ವಿರುದ್ಧ ಸಿಎಸ್ ವಂದಿತಾ ಶರ್ಮ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ರೋಹಿಣಿ ವಿರುದ್ಧ ತಾವು ಮಾಡಿರುವ ಆರೋಪಗಳ ಬಗ್ಗೆ ಸಿಎಸ್‌ಗೆ ರೂಪಾ ಸ್ಪಷ್ಟನೆ ಕೊಟ್ಟರು. ಅಗತ್ಯ ವಾಟ್ಸಪ್ ಚಾಟ್ಸ್ ದಾಖಲೆ, ಇತರೆ ದಾಖಲೆಗಳನ್ನು ನೀಡಿದ್ದಾರೆ. ಸಾ.ರಾ.ಮಹೇಶ್ ಸಂಧಾನ ಪ್ರಕರಣ, ಮೈಸೂರು ಡಿಸಿ ಆಗಿದ್ದಾಗಿನ ಪ್ರಕರಣಗಳಲ್ಲಿ ರೂಪಾ ಅವರು ಸಹ ಸಿಂಧೂರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜತೆಗೆ ರೋಹಿಣಿ ವಿರುದ್ಧ ಇದುವರೆಗೆ ಯಾವುದೇ ಪ್ರಕರಣದಲ್ಲೂ ಕ್ರಮ ಆಗಿಲ್ಲದಿರುವ ಬಗ್ಗೆ ಗಮನ ಹರಿಸುವಂತೆಯೂ ಸಿಎಸ್‌ಗೆ ಮನವಿ ಮಾಡಿದ್ದಾರೆ.
ರೋಹಿಣಿ ಸಿಂಧೂರಿ ಮತ್ತು ರೂಪಾ ಪ್ರಕರಣದಲ್ಲಿ ರೋಹಿಣಿ ಪತಿ ಸುಧೀರ್ ರೆಡ್ಡಿ ಎಂಟ್ರಿ ಕೊಟ್ಟಿದ್ದಾರೆ. ಡಿ.ರೂಪಾ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ರೂಪಾ ವಿರುದ್ಧ ಸುದೀರ್ ರೆಡ್ಡಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಧರ್ಮಪತ್ನಿ ರೋಹಿಣಿ ಸಿಂಧೂರಿ ಅವರ ಖಾಸಗಿ ಪೋಟೋಸ್‌ಗಳನ್ನ ಐಪಿಎಸ್ ಅಧಿಕಾರಿಯಾಗಿರೋ ಡಿ.ರೂಪಾ ಸಾಮಾಜಿಕ ಜಾಲಾತಾಣದಲ್ಲಿ ಹಾಕಿ, ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಡಿ.ರೂಪಾ, ಸಿಂಧೂರಿ ಅವರ ತೀರ ವೈಯಕ್ತಿಕ ಪೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿರೋದು ನೋಡಿದರೆ, ಪೋಟೋಸ್‌ಗಳನ್ನ ಹ್ಯಾಕ್ ಮಾಡಿರೋ ಅನುಮಾನಗಳು ಗೋಚರಿಸುತ್ತಿವೆ. ಅದ್ದರಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸುಳ್ಳು ಸುದ್ದಿ ಹಾಗೂ ತೇಜೋವಧೆ ಮಾಡುತ್ತಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಕಾನೂನು ಕ್ರಮ ಕೈಗೊಂಡು ಪೋಟೋ ಸಿಕ್ಕಿದ್ದರ ಹಿಂದಿನ ಸತ್ಯಾಸತ್ಯತೆಯನ್ನ ತನಿಖೆಯ ಮೂಲಕ ಬಹಿರಂಗಪಡಿಸುವಂತೆ ದೂರಿನಲ್ಲಿ ಉಲ್ಲೇಖಿಸಿ ಎರಡು ಪುಟಗಳ ದೂರು ದಾಖಲು ಮಾಡಿದ್ದಾರೆ.
ಡಿ.ರೂಪಾ ಮತ್ತು ರೋಹಿಣಿ ಬಳಿ ಸ್ಪಷ್ಟನೆ ಮತ್ತು ಪರಸ್ಪರರ ಮೇಲೆ ದೂರುಗಳನ್ನು ಸ್ವೀಕರಿಸಿದ ಸಿಎಸ್ ವಂದಿತಾ ಶರ್ಮ ಅವರು, ಸಂಜೆ ಸಿಎಂ ಬೊಮ್ಮಾಯಿ ಭೇಟಿ ಮಾಡಿ ವಿವರ ನೀಡಿದರು. ಸಂಪುಟ ಸಭೆಗೂ ಮುನ್ನ ಸಿಎಂ ಭೇಟಿ ಮಾಡಿ ಇಬ್ಬರ ಬಗ್ಗೆಯೂ ಸಿಎಸ್ ಅವರು ಸಿಎಂಗೆ ಮಾಹಿತಿ ನೀಡಿದ್ದಾರೆ. ಇದೀಗ ಸರ್ಕಾರದ ನಡೆ ಕುತೂಹಲ ಮೂಡಿಸಿದೆ. ಇಬ್ಬರು ಅಧಿಕಾರಿಗಳ ಕಚ್ಚಾಟಕ್ಕೆ ಫುಲ್‌ಸ್ಟಾಪ್ ಬೀಳುತ್ತಾ ಅಂತಾ ಕಾದು ನೋಡಬೇಕಿದೆ..