ಪುತ್ತೂರು: ಖ್ಯಾತ ನಟ ಪೃಥ್ವಿ ಅಂಬರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ದೂರ ದರ್ಶನ’ ಚಿತ್ರ ಈಗಾಗಲೇ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪುತ್ತೂರಿನ ‘ಭಾರತ್ ಸಿನಿಮಾಸ್’ ನಲ್ಲಿ ಪ್ರೇಕ್ಷಕರ ಜೊತೆ ಚಿತ್ರ ವೀಕ್ಷಣೆಗೆ ತಂಡ ಮಾ.8 ರಂದು ಆಗಮಿಸಲಿದೆ.
ನಿರ್ಮಾಣ: ರಾಜೇಶ್ ಭಟ್, ನಿರ್ದೇಶನ: ಸುಕೇಶ್ ಶೆಟ್ಟಿ, ಪಾತ್ರವರ್ಗ: ಪೃಥ್ವಿ ಅಂಬಾರ್, ಉಗ್ರಂ ಮಂಜು, ಅಯಾನಾ, ಸುಂದರ್ ವೀಣಾ, ಹುಲಿ ಕಾರ್ತಿಕ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ದೂರದರ್ಶನ’ ಎಂಬ ಶೀರ್ಷಿಕೆ ಕೇಳಿದರೆ ಥಟ್ ಅಂತ ನೆನಪಾಗೋದು 80-90ರ ದಶಕ. ಭಾರತಕ್ಕೆ ಟಿವಿ ಕಾಲಿಟ್ಟ ಸಮಯದಲ್ಲಿ ಒಂದು ಸಂಚಲನವೇ ಸೃಷ್ಟಿ ಆಗಿತ್ತು. ಪ್ರತಿ ಊರಿನಲ್ಲಿ ಸಾಕಷ್ಟು ಬದಲಾವಣೆಗಳು ಆದವು. ಜಗತ್ತಿನ ಅನೇಕ ವಿಚಾರಗಳು ಮನೆ-ಮನೆಗೆ ತಲುಪುವಂತಾಯಿತು. ಮನರಂಜನೆಗೆ ಹೊಸ ಆಯಾಮ ಸಿಕ್ಕಿತು. ಅದರ ಜೊತೆಗೆ ಜನರ ನಡುವಿನ ಸಂಬಂಧಗಳು ಕೂಡ ಬದಲಾಗತೊಡಗಿದವು. ಈ ಎಲ್ಲ ಘಟನೆಗಳನ್ನು ಕೇಂದ್ರವಾಗಿ ಇಟ್ಟುಕೊಂಡು ‘ದೂರದರ್ಶನ’ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಮತ್ತು ಉಗ್ರಂ ಮಂಜು ಅವರು ಪ್ರಮುಖ ಪಾತ್ರ ಮಾಡಿದ್ದಾರೆ.
ಮೊದಲ ಬಾರಿಗೆ ಟಿವಿ ಬಂದಾಗ ಆ ಫೀಲ್ ಹೇಗಿತ್ತು ಎಂಬುದು ಇಂದಿನ ಹೊಸ ತಲೆಮಾರಿನ ಮಕ್ಕಳಿಗೆ ಅರ್ಥವಾಗೋದು ಕಷ್ಟ. ಆ ದಿನಗಳ ಅನುಭವವೇ ಭಿನ್ನ. ವಾರಕ್ಕೊಂದು ಸಿನಿಮಾ, ಪ್ರತಿ ವಾರ ಚಿತ್ರಮಂಜರಿ ನೋಡಿಕೊಂಡು ಬೆಳೆದವರಿಗೆ ಮಾತ್ರ ಅದರ ಮಜಾ ಏನೆಂಬುದು ಗೊತ್ತು. ಆ ನೆನಪುಗಳ ಪುಟ ತೆರೆಯುವ ರೀತಿಯಲ್ಲಿ ‘ದೂರದರ್ಶನ’ ಸಿನಿಮಾ ಮೂಡಿಬಂದಿದೆ..
