ಕುಂದಾಪುರ: ಸಾರ್ವಜನಿಕ ವಿತರಣಾ ಪದ್ದತಿಯಡಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಮೇ ತಿಂಗಳಿಂದ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿಯೊಂದಿಗೆ ಬೆಳ್ತಿಗೆ ಅಕ್ಕಿಯನ್ನು ವಿತರಿಸಲಾಗುತ್ತದೆ. ಒಟ್ಟು ಪ್ರಮಾಣದ ಅರ್ಧದಷ್ಟು ಕುಚ್ಚಲಕ್ಕಿ ಹಾಗೂ ಇನ್ನರ್ಧ ಬೆಳ್ತಿಗೆ ಅಕ್ಕಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಗಳು ಲಾಕ್ ಡೌನ್ ಅವಧಿಯಲ್ಲಿ ಬೆಳಗ್ಗೆ 7 ರಿಂದ 10 ವರೆಗೆ ಕಾರ್ಯನಿರ್ವಹಿಸುತ್ತದೆ. ರಜಾ ದಿನಗಳಂದು ಕೂಡಾ ಈ ಅವಧಿಯಲ್ಲಿ ತೆರೆದಿರುತ್ತದೆ. ಈ ಅವಧಿಯಲ್ಲಿ ಪಡಿತರ ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಯಾವುದೇ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಅರ್ಹರಿಗೆಲ್ಲರಿಗೂ ಪಡಿತರ ವಿತರಿಸಲಾಗುವುದು. ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಘೋಷಿಸಲಾದ ಹೆಚ್ಚುವರಿ ಪಡಿತರ ಸಾಮಾಗ್ರಿ ಕೂಡ ಶೀಘ್ರ ವಿತರಣೆಯಾಗಲಿದೆ.