ಪುತ್ತೂರು : ಶಾಲಾ – ಕಾಲೇಜುಗಳು ಆರಂಭವಾಗುತ್ತಿದ್ದಂತೆ ಇದೀಗ ಬಸ್ ಸಮಸ್ಯೆ ಕಾಡಲು ಆರಂಭವಾಗಿದೆ. ಸುಳ್ಯ, ವಿಟ್ಲ, ಉಪ್ಪಿನಂಗಡಿ ಮತ್ತಿತರ ಕಡೆಗಳಿಂದ ಬರುವ ವಿದ್ಯಾರ್ಥಿಗಳು ಬೆಳಗಿನ ಸಮಯದಲ್ಲಿ ಬಸ್ ಗಳ ಸಂಖ್ಯೆ ಕಡಿಮೆ ಇರುವುದರಿಂದ ಶಾಲೆ – ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವುದು ಕಷ್ಟವಾಗಿದ್ದು, ಈ ವಿಚಾರವಾಗಿ ಎನ್.ಎಸ್.ಯು.ಐ ಪುತ್ತೂರಿನ ಕಾರ್ಯಕರ್ತರು ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಡಿ.ಸಿ ಜಯಕರ ಶೆಟ್ಟಿ ರವರಿಗೆ ಮನವಿ ಸಲ್ಲಿಸಿದರು.

ಸುಳ್ಯ, ವಿಟ್ಲ, ಉಪ್ಪಿನಂಗಡಿ ಕಡೆಯಿಂದ ಪುತ್ತೂರಿಗೆ ಬೆಳಗ್ಗೆ 7:00 ಗಂಟೆಯಿಂದ 8:30 ವರೆಗೆ ಸಂಚರಿಸುವ ಬಸ್ ಗಳ ಸಂಖ್ಯೆ ಕಡಿಮೆಯಿದ್ದು, ಆದಷ್ಟು ಶೀಘ್ರ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ತಿಳಿಸುವಂತೆ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಪುತ್ತೂರಿನ ಕಾರ್ಯಕರ್ತರು ಮನವಿಯಲ್ಲಿ ತಿಳಿಸಿದರು.
ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು, “ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಪುತ್ತೂರಿಗೆ ವಿಶೇಷವಾಗಿ 60 ಹೆಚ್ಚುವರಿ ಬಸ್ ಗಳ ಖರೀದಿಗೆ ಸರ್ಕಾರ ಮುಂದಾಗಿದೆ” ಎಂದು ತಿಳಿಸಿದ್ದಾರೆ.
ಜೊತೆಗೆ ಐಟಿಐ – ಡಿಪ್ಲೋಮ ವಿಭಾಗದ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ಜೂನ್ 30 ವರೆಗೆ ವಿಸ್ತರಿಸಬೇಕೆಂದು ವಿನಂತಿಸಿದಾಗ, ತಕ್ಷಣವೇ ಸ್ಪಂದಿಸಿದ ಡಿ.ಸಿ ಜಯಕರ ಶೆಟ್ಟಿ ರವರು, “ಜೂನ್ 30 ವರೆಗೆ ಪಾಸ್ ಅವಧಿ ವಿಸ್ತರಿಸಿ ಆದೇಶ ಹೊರಡಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿ ಎಡ್ವರ್ಡ್ ಪುತ್ತೂರು, ನಗರ ಎನ್.ಎಸ್.ಯು.ಐ ಅಧ್ಯಕ್ಷ ಸುಹೈಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸ್ಟನ್ ಫೆರ್ನಾಂಡಿಸ್, ತಾಲೂಕು ಪ್ರಧಾನ ಕಾರ್ಯದರ್ಶಿ ನೌಶಾದ್, ಕುಡಿಪ್ಪಾಡಿ ವಲಯ ಎನ್ ಎಸ್ ಯು ಐ ಅಧ್ಯಕ್ಷ ಇರ್ಫಾನ್, ಕಾರ್ಯದರ್ಶಿ ಹಾರಿಸ್ ಮುಂತಾದವರು ಉಪಸ್ಥಿತರಿದ್ದರು.