ಬೆಂಗಳೂರು : ಕನಸು ಮಾರಾಟಕ್ಕಿದೆ ಕನ್ನಡ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪ್ರಶಸ್ತಿಯ ಕಿರೀಟ ತೊಡಿಸಿದ ಹೆಮ್ಮೆ ಕನಸು ಮಾರಾಟಕ್ಕಿದೆ ಚಿತ್ರಕ್ಕೆ ಸಂದಿದೆ.
11ನೇ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2021ಕ್ಕೆ ಆಯ್ಕೆಯಾಗಿದೆ. ವಿಶೇಷ ವಿಭಾಗದಲ್ಲಿ ಪ್ರಶಸ್ತಿಯನ್ನು ಕನಸು ಮಾರಾಟಕ್ಕಿದೆ ಕನ್ನಡ ಚಲನಚಿತ್ರ ಪಡೆದುಕೊಂಡಿದೆ. ಚಿತ್ರದ ನಿರ್ದೇಶಕ ಸ್ಮಿತೇಶ್ ಬಾರ್ಯ ಮಾಹಿತಿಯನ್ನು ನೀಡಿದ್ದಾರೆ.
ಹಲವಾರು ರಾಷ್ಟ್ರಗಳ ಸಿನೆಮಾಗಳ ಜೊತೆ ಕನ್ನಡದ ಕನಸು ಮಾರಾಟಕ್ಕಿದೆ ಚಿತ್ರವು ಆಯ್ಕೆಯಾಗಿದೆ. ಪ್ರತಿ ವರ್ಷ ದೆಹಲಿಯಲ್ಲಿ ಚಲನ ಚಿತ್ರೋತ್ಸವ ಸಮಾರಂಭ ನಡೆಯುತ್ತದೆ. ಈ ಬಾರಿ ಕೋವಿಡ್ ಕಾರಣದಿಂದಾಗಿ ಆನ್ ಲೈನ್ ಮೂಲಕ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಈ ಚಲನಚಿತ್ರವನ್ನು ಶಿವಕುಮಾರ್ ಬಿ ನಿರ್ಮಾಣ ಮಾಡಿದ್ದು, ನಾಯಕರಾಗಿ ಪ್ರಜ್ಞೆಶ್ ಮತ್ತು ನಾಯಕಿಯರಾಗಿ ಸ್ವಸ್ತಿಕಾ ಮತ್ತು ನವ್ಯ ಪೂಜಾರಿ ಅಭಿನಯಿಸಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದ ಗೌಡ, ಅನೀಶ್ ಪೂಜಾರಿ, ಧೀರಜ್ ಚಿದಂಬರ, ಹಿರಿಯ ನಟ ಸಿದ್ಲಿಂಗು ಶ್ರೀಧರ್, ಮೋಹನ್ ಶೇಣಿ, ಆಥಿರ ಮೊದಲಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.