ಉಡುಪಿ : ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯರ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣವನ್ನು ಸಿಐಡಿಗೆ ರಾಜ್ಯ ಸರಕಾರ ನೀಡಿದ ಮೇಲೆ ತನಿಖೆ ಪುನರಾರಂಭಗೊಂಡಿದ್ದು, ಸಂತ್ರಸ್ತೆಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಇಂದು ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ಉಡುಪಿಗೆ ಆಗಮಿಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.
ಮರು ತನಿಖೆ ನಡೆಸಲು ಸಿಐಡಿ ಅಧಿಕಾರಿಗಳು ಬೊಂಬೆಯನ್ನು ಸೃಷ್ಟಿಸಿ ತನಿಖೆ ಆರಂಭಿಸಿದ್ದಾರೆ.
ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ ಎಸ್.ಪಿ ರಾಘವೇಂದ್ರ ಹೆಗಡೆ ಪ್ರಕರಣದ ತನಿಖೆ ಶುರು ಮಾಡಿದ್ದಾರೆ. ಘಟನೆ ನಡೆದ ಕಾಲೇಜಿಗೆ ಭೇಟಿ ಕೊಟ್ಟ ಸಿಐಡಿ ತಂಡ ಮಾಹಿತಿಗಳನ್ನು ಕಲೆ ಹಾಕಿದೆ.
ಸಂತ್ರಸ್ತೆಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಕಾಲೇಜಿನ ಆಡಳಿತ ಮಂಡಳಿ ಸಿಬ್ಬಂದಿಯನ್ನು ವಿಚಾರಣೆ ಮಾಡಿ ದಾಖಲೆಗಳನ್ನು ಸಂಗ್ರಹ ಮಾಡಿದ್ದಾರೆ. ಜು.18 ರಂದು ನಡೆದ ಘಟನೆಯನ್ನು ಸಿಐಡಿ ಮರು ಸೃಷ್ಟಿ ಮಾಡಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಡಿಜಿಪಿ ಮನೀಶ್ ಕರ್ಬೀಕರ್, ಉಡುಪಿಯಲ್ಲಿ ನಡೆದ ವಿಡಿಯೋ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದೇನೆ.
ಉಡುಪಿ ಪೊಲೀಸರು ನಡೆಸಿದ ತನಿಖೆ ವರದಿ ಪರಿಶೀಲನೆ ಮಾಡಿದ್ದೇನೆ. ಪೊಲೀಸ್ ಮತ್ತು ಸಿಐಡಿ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮುಂದೇನು ತನಿಖಾ ಪ್ರಕ್ರಿಯೆ ನಡೆಸಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ತನಿಖಾಧಿಕಾರಿಯಾಗಿ ಸಿಐಡಿ ಡಿವೈಎಸ್ಪಿ ಅಂಜುಮಾಲ ಅವರನ್ನು ನೇಮಕ ಮಾಡಲಾಗಿದೆ ಎಂದರು.
ತನಿಖೆಯ ಮೇಲ್ವಿಚಾರಣೆಯನ್ನು ಸಿಐಡಿ ಎಸ್ ಪಿ ರಾಘವೇಂದ್ರ ಹೆಗಡೆ ನಡೆಸುತ್ತಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ತನಿಖಾಧಿಕಾರಿ ಕೈ ಸೇರಲಿದೆ. ಪ್ರಕರಣದ ತನಿಖೆ ಆದ ಬಳಿಕ ಕೋರ್ಟಿಗೆ ಮುಂದಿನ ವರದಿ ಕೊಡುತ್ತೇವೆ. ಸಿಐಡಿ ತನಿಖೆ ಉಡುಪಿಯಲ್ಲಿ ಮುಂದುವರಿಯಲಿದೆ. ಮೂರು ಮೊಬೈಲ್ ಎಫ್‌ಎಸ್‌ಎಲ್ ವರದಿ ತನಿಖೆಯ ಒಂದು ಭಾಗವಾಗಿ ನಾವು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.