ಪುತ್ತೂರು: ಕೊರಿಯರ್ ಮೂಲಕ ಬಂದ ಪಾರ್ಸೆಲ್‌ನ್ನು ನೀಡದೇ ಇರುವ ಬಗ್ಗೆ ಪ್ರಶ್ನಿಸಲು ತೆರಳಿದ ಸಂದರ್ಭದಲ್ಲಿ ವೈದ್ಯೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಆರೋಪದಡಿ ಪುತ್ತೂರು ನಗರ ಠಾಣಾ ಪೊಲೀಸರು ಬನ್ನೂರಿನಲ್ಲಿ ಕಾರ್ಯಾಚರಿಸುತ್ತಿರುವ ‘ಡೆಲಿವರಿ’ ಕೊರಿಯರ್ ಸಂಸ್ಥೆಯ ಫ್ರಾಂಚೈಸಿ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರಿನ ವೈದ್ಯೆ ನೀಡಿರುವ ದೂರಿನಂತೆ ಸುಳ್ಯದ ಗುತ್ತಿಗಾರು ನಿವಾಸಿಯಾಗಿದ್ದು ಬನ್ನೂರಿನಲ್ಲಿರುವ ‘ಡೆಲಿವರಿ’ ಕೊರಿಯರ್ ಸಂಸ್ಥೆ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ಎಂಬವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ವೈದ್ಯೆಯೊಬ್ಬರಿಗೆ ಅವರ ಸ್ನೇಹಿತರಿಂದ ಪಾರ್ಸೆಲ್ ಒಂದು ಬರುವುದಿತ್ತು. ಪಾರ್ಸೆಲ್‌ನ ಮೊತ್ತವನ್ನು ಮೊದಲೇ ಪಾವತಿಸಲಾಗಿತ್ತು. ಎಪ್ರಿಲ್ 19ರೊಳಗೆ ಆ ಪಾರ್ಸೆಲ್ ವಾರಸುದಾರರಾದ ವೈದ್ಯೆಯನ್ನು ತಲುಪಬೇಕಿತ್ತು. ಆದರೆ ತಲುಪದೇ ಇದ್ದಾಗ, ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ‘ಡೆಲಿವರ್ಡ್ ಟು ಕಸ್ಟಮರ್’ ಎಂದು ವೈದ್ಯೆಯವರ ಸಹಿಯನ್ನು ಹಾಕಿ ಅದಾಗಲೇ ಕೊರಿಯರ್ ಪಾರ್ಸೆಲ್‌ನ್ನು ಸ್ವೀಕರಿಸಿರುವ ವಿಚಾರ ತಿಳಿದು ಬಂದಿತ್ತು. ಈ ಬಗ್ಗೆ ವಿಚಾರಿಸಲೆಂದು ವಾರಿಸುದಾರರಾದ ವೈದ್ಯರು ಎಪ್ರಿಲ್ 19ರಂದು ಬನ್ನೂರಿನಲ್ಲಿರುವ ಡೆಲಿವರಿ ಸಂಸ್ಥೆಯ ಫ್ರಾಂಚೈಸಿಗೆ ತೆರಳಿ ಪ್ರಶ್ನಿಸಿದ್ದರು. ಈ ಸಂದರ್ಭ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪಾರ್ಸೆಲ್‌ನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಾರಿಸುದಾರರು ದೂರು ನೀಡಿದ್ದರು. ದೂರು ಸ್ವೀಕರಿಸಿದ ಪುತ್ತೂರು ನಗರ ಠಾಣಾ ಪೊಲೀಸರು ರಾಜ ಮಾವಿನಕಟ್ಟೆ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 506ರನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.