✍️ಚೈತ್ರ ಕಬ್ಬಿನಾಲೆ
ಅಂದೇಕೋ ನನ್ನ ಸ್ನೇಹಿತೆ ರಾಯರ ಮಠದಲ್ಲಿ ಕುಳಿತು ಯಾರಿಗೂ ಕಾಣದಂತೆ ಮುಖದ ಮೇಲೆ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದಳು.ಪ್ರತಿ ಗುರುವಾರ ನಗು ಮೊಗದಿಂದ ಮಾತಾಡಿಸುತ್ತಿದ್ದ ಶ್ರದ್ದಾ ಇಂದೇಕೆ ಇಷ್ಟೊಂದು ಅಳುತಿದ್ದಾಳೆ ಎಂದು ಮನದಲ್ಲೇ ಪ್ರಶ್ನಿಸುತ್ತ ಆಕೆ ಕುಳಿತ ಜಾಗಕ್ಕೆ ಹೆಜ್ಜೆ ಇಟ್ಟೆ. ದೇವಸ್ಥಾನದ ವಠಾರವಾದ್ದರಿಂದ ಅನೇಕ ಭಕ್ತರು ಓಡಾಡುತಿದ್ದರು. ಅವರ ಮುಂದೆ ಕೇಳಿದ್ರೆ ಆಕೆಗೆ ಮುಜುಗರವಾಗಲ್ವೆ? ಎಂದು ಮೆಲ್ಲನೆ ಏನೋ ಕೊಡುವ ನೆಪದಲ್ಲಿ ಆಕೆಯನ್ನು ಅಲ್ಲೇ ಸಮೀಪದ ಹಾಲ್ಗೆ ಕರೆದುಕೊಂಡು ಹೋಗಿ… ಹೇ.. ಯಾಕೆ ಅಳ್ತಾ ಇದ್ದೀಯ?? ಎಂತಾಯಿತು ಹೇಳು ಪ್ಲೀಸ್ ಎಂದೆ. ನನ್ನ ಕೈ ಆಕೆಯ ಮುಖಕ್ಕೆ ತಾಗಿತೋ ಇಲ್ವೋ.. ಅವಳು ದುಃಖ ಸಹಿಸಲಾಗದೆ ನನ್ನ ತಬ್ಬಿಕೊಂಡು ಜೋರಾಗಿ ಅಳತೊಡಗಿದಳು.ಅವಳ ಕಣ್ಣೀರೆ ನನ್ನ ಪ್ರಶ್ನೆಗಳಿಗೆ ಮೌನದಿ ಉತ್ತರ ನೀಡಿತ್ತು…!!!
ಶ್ರದ್ದಾ ಕಡುಬಡತನದಲ್ಲಿ ಬೆಳೆದಾಕೆ. ತಂದೆ ಜವಾಬ್ದಾರಿ ಮರೆತು ಬೇರೊಂದು ಮದ್ವೆ ಆಗಿ ಊರು ಬಿಟ್ಟಿದ್ದ. ತಾಯಿ ಹೊಟ್ಟೆ ಪಾಡಿಗಾಗಿ ಪಾತ್ರೆ ತೊಳೆಯಲು ಭಟ್ರ ಮನೆಗೆ ಹೋಗಿ ಒಂದಿಷ್ಟು ಉಳಿದ ಆಹಾರ, ಸಂಪಾದನೆ ತೆಗೊದುಕೊಂಡು ಹೋಗಿ ಗುಡಿಸಲು ಸೇರುತಿದ್ದಿದ್ದು ತನ್ನ ಉಸಿರಾದ ಮಗಳ ಭವಿಷ್ಯಕ್ಕಾಗಿ… ಅಷ್ಟೇ. ಹೆಣ್ಣಿಗೆ ಗಂಡ ಇಲ್ಲದಿದ್ದರೆ ಅಕ್ಕ ಪಕ್ಕದವ್ರೆ ಬೇಡದನ್ನು ಆಡುವ ಕಾಲವಿದು. ಅಂತಹ ಸಮಾಜದ ನಡುವೆ ತಾನೊಬ್ಬಳೇ ದುಡಿದು ಹೆಣ್ಣು ಮಗಳನ್ನು ಸಾಕುವುದು ಸಾಧನೆಯೇ ಅಲ್ವಾ??
ಹೀಗೆ ದಿನಗಳು ಉರುಳುತಿತ್ತು. ನನ್ನ ಪ್ರಿಯ ಸ್ನೇಹಿತೆ ಶ್ರದ್ದಾ ನನಗೆ ತಿಳಿಸದೇ ಫೇಸ್ಬುಕ್ನಲ್ಲಿ ಪರಿಚಯವಾದ ಹುಡುಗನ ಜೊತೆ ಪ್ರೀತಿಗೆ ಸಿಲುಕಿದ್ದಳು.ಕಾಲೇಜಿನ ಫೀಸ್ ಕಟ್ಟಲು ತಾಯಿ ಕಷ್ಟ ಪಟ್ಟು ಕೂಡಿಟ್ಟ ಹಣದಿಂದ ಮೊಬೈಲ್ ಖರೀದಿಸಿ ಆತನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಳು. ನನ್ನ ಗೆಳತಿಯಾದರೂ ಆಕೆಯ ಕುಟುಂಬ, ಬಡತನ ಇದ್ಯಾವುದರ ಕುರಿತು ನಾವೆಂದೂ ಚರ್ಚಿಸಿರಲಿಲ್ಲ.ಆತನ ಜೊತೆ ಸುತ್ತಾಡಲು ವಾರಕ್ಕೊಂದು ಹೊಸ ಬಟ್ಟೆ, ಅಲಂಕಾರಗಳು, ಬೆಲೆಬಾಳುವ ಶೂ ನೋಡಿ ನಾನೊಮ್ಮೆಮೆಲ್ಲಗೆ ಹೇಳಿದ್ದೆ… ” ಬಡತನ, ಬಿಸಿಲು, ಗದ್ದಲದ ನಡುವೆ ಬದುಕಿರುವ ನನಗೆ ತಂದೆ ತಾಯಿಯೇ ಸರ್ವಸ್ವ.ಬದುಕಿನಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುವಾಗ ನೂರು ಬಾರಿ ಯೋಚಿಸಬೇಕು. ಯಾಕಂದ್ರೆ ನಮ್ಮ ತಪ್ಪುಗಳು ಹೆತ್ತವರನ್ನು ಇನ್ನೊಬ್ಬರ ಮುಂದೆ ತಲೆ ತಗ್ಗಿಸುವಂತೆ ಮಾಡಬಾರದು.., ಯಾರನ್ನು ಅತಿಯಾಗಿ ನಂಬುವುದಿಲ್ಲ “ಎಂದು. ನನ್ನ ಮಾತುಗಳ ನಡುವೆ ಆಕೆಯ ಪ್ರೇಮಿಯ ಸಂದೇಶವೇ ಗೆದ್ದು ಆಕೆ ಅವನಿಗೆ ಪ್ರತಿಕ್ರಿಯಿಸುವುದರಲ್ಲೇ ಬ್ಯುಸಿ ಇದ್ದಳು.
ಪ್ರೀತಿಯ ನೌಕೆ ಬಹುಕಾಲ ನೀರಿನಲ್ಲಿ ತೇಲಲಿಲ್ಲ. ಇನ್ನೊಬ್ಬಳ ಮೋಹವೆಂಬ ಬಿರುಗಾಳಿಗೆ ಸಿಲುಕಿ ನೌಕೆಯನ್ನು ಆಕೆಯ ಪ್ರಿಯಕರ ಮುಳುಗಿಸಿದ. “ದಯವಿಟ್ಟು ನನ್ನ ಮದುವೆ ಆಗು. ಹೊಟ್ಟೇಲಿ ನಿನ್ನ ಮಗು ಬೆಳಿತಿದೆ.. ಈ ಸಮಾಜಕ್ಕೆ ನಾನು ಹೇಗೆ ಮುಖ ತೋರಿಸೋದು.. ಪ್ಲೀಸ್.. ಎಂದು ಶ್ರದ್ದಾ ಬೇಡಿಕೊಂಡಾಗ ” ಹೇ ಹುಚ್ಚಿ, ನೀನೊಂದು ಭೂಮಿ, ನಾನು ಆಕಾಶ. ನನಗೂ ನಿನಗೂ ಎಲ್ಲಿಯ ಅನುಬಂಧ?..” ಎಂದು ನಗುತ್ತಾ ಅವಳನ್ನು ದೂಡಿ ಅವನ ದಾರಿ ಹಿಡಿದ.ಶ್ರದ್ದಾ ಮುಳುಗಲಾಗದೆ, ಈಜಲಾರದೆ ಒದ್ದಾಡುತ್ತ ಸಾಯುವ ನಿರ್ಧಾರ ಮಾಡಿದ್ದಳು.
ತಾಯಿ ಮಗಳ ದಾರಿಯನ್ನೇ ಕಾಯುತ್ತ.. ” ಈ ನರಕದ ಜೀವನ ನಾನು ಕಂಡಿದ್ದೆ ಸಾಕು. ನನ್ನ ಮಗಳನ್ನು ಒಂದೊಳ್ಳೆ ಮನೆಗೆ ಸೇರಿಸಿ ನನ್ನ ಜವಾಬ್ದಾರಿ ಮುಗಿಸಿ ಈ ಲೋಕಕ್ಕೆ ವಿದಾಯ ಹೇಳ್ತಿನಿ.. ಪಾಪ, ನನ್ನ ಮಗಳಿಗೆ ನಾನಂದ್ರೆ ಪ್ರಾಣ. ನಾನು ಹಾಕಿದ ಗೆರೆನ ಯಾವತ್ತೂ ದಾಟಿಲ್ಲ..ಅಪ್ಪಟ ಚಿನ್ನ.. ನನಗೆ ಕಾನ್ಸರ್ ಇರೋ ವಿಷ್ಯ ಆಕೆಗೆ ಗೊತ್ತಾಗೋದೇ ಬೇಡ.. ಮಗು ಎಷ್ಟು ಅಳುತ್ತೋ ಏನೋ.. ” ಎಂದೆಲ್ಲಾ ಒಬ್ಬಳೇ ಗೊಣಗಿಕೊಳ್ತಾ ಇದ್ರು..
ಇದನ್ನೆಲ್ಲಾ ಮನೆ ಹೊರಗೋಡೆಯ ಅಂಚಿನ ಬಳಿ ನಿಂತು ಕೇಳಿಸಿಕೊಂಡ ಶ್ರದ್ದಾಗೆ ಸಿಡಿಲು ಬಡಿದಂತಾಯ್ತು.. “ನಾನೆಷ್ಟು ಪಾಪಿ. ಅಮ್ಮನ ನಂಬಿಕೆನ ಮಣ್ಣುಪಾಲು ಮಾಡಿ ಸಾಯೋಕೆ ಹೊರಟಿದ್ದೆ. ನನ್ನ ಪಾಲಿಗಿದ್ದ ಒಂದೇ ಒಂದು ಜೀವ ನನ್ನ ಅಮ್ಮ.. ನಾನು ಸತ್ರೆ ಅವಳ ಜೀವವನ್ನು ಉಳಿಸೋಕೆ ಯಾರೂ ಇಲ್ವೇ.. ಅಯ್ಯೋ ವಿಧಿಯೇ… ” ಪುಟ್ಟ ಮಗುವಿನಿಂದ ಇಲ್ಲಿಯವರೆಗೆ ಅಮ್ಮನೊಡನೆ ಕಳೆದ ಕ್ಷಣವ ಎನಿಸಿ ಅಲ್ಲೇ ಕುಸಿದಳು..ಸ್ವಲ್ಪ ಹೊತ್ತಲ್ಲೇ ಅಮ್ಮನ ಆತಂಕವ ಅರಿತು ಏನೂ ನೆಡೆದಿಲ್ಲ ಎಂಬಂತೆ ಮುಖವಾಡ ಹಾಕಿಕೊಂಡು ಮನೆ ಒಳಗೆ ನಡೆದಳು..
ಅಂದೇಕೋ ಅಮ್ಮನ ಪ್ರೀತಿ ಆಳವಾಗಿತ್ತು.. ಅವಳೇ ತುತ್ತಿಟ್ಟು ಉಣಿಸಿದಳು. ಮಗಳ ಕಾಲ್ಮೇಲೆ ತಲೆಯಿಟ್ಟು ಮಗುವಂತೆ ಮಲಗಿದಳು ಹೆತ್ತಾಕೆ..ಶ್ರದ್ದಾ ಳ ನೋವಿನ ತಾಪಕ್ಕೆ ಕಣ್ಣ ಹನಿಗಳು ತಾಯಿಯ ಹಣೆ ಮೇಲೆ ಬೀಳತೊಡಗಿದವು. ಮೆಲ್ಲಗೆ ಒರೆಸಿ ತಾಯಿಯ ತಲೆಸವರಿ ಆಲೋಚನೆಯತ್ತ ಮುಳುಗಿದಳು ಶ್ರದ್ದಾ.. ಬೆಳಗಾಯಿತು..ಶ್ರದ್ದಾ ದಿಕ್ಕೇ ತೋಚದೆ ರಾಯರ ಗುಡಿಯತ್ತ ಬಂದಿದ್ದಳು. ನಡೆದ ಘಟನೆಯನ್ನು ಏಣಿಸಿಯೇ ಆಕೆ ಅಳುತಿದ್ದಿದ್ದು.
ಆಕೆಗೆ ನಾನು ಸಾಂತ್ವನ ತುಂಬಿದೆ. ನನ್ನ ಪರಿಚಯದ ಡಾಕ್ಟರ್ ಬಳಿ ವಿಷ್ಯ ತಿಳಿಸಿ ಅಭಾಷನ್ ಮಾಡಿಸಿದೆವು..ಅದೇ ಆಸ್ಪತ್ರೆಯಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಕೊಟ್ಟು ಆಕೆಯನ್ನು ಇನ್ನಷ್ಟು ಸಂತೈಸಿದ ಪುಣ್ಯಾತ್ಮ ಡಾಕ್ಟರ್ ಸುಮಂತ್. ಕಾಲ ಉರುಳಿತು..ಸುಮಂತ್ ಶ್ರದ್ದಾಳನ್ನೇ ವರಿಸಿದ.. ತಾಯಿ ಮಗಳಿಗಾಗಿ ಹಿಡಿದಿಟ್ಟ ಉಸಿರು ದಿನ ದಿನ ಅಕೆಯಿಲ್ಲದೇ ಒಂಟಿತನದ ಬೇಗೆಯಲ್ಲಿ ಭಾರವಾಗಿತ್ತು. ಮದ್ವೆ ಆದ್ಮೇಲೆ ಗಂಡನೇ ಸರ್ವಸ್ವವಾಗಿ ಶ್ರೀಮಂತಿಕೆಯ ಐಸಿರಿಯಲ್ಲಿ ಹಾಯಾಗಿದ್ದ ಮಗಳಿಗೆ ” ಬಡತನದ ತಾಯಿಯ ನೆನಪಿದ್ರೂ ಆಕೆಯನ್ನು ನೋಡುವ ಮಾತಾಡಿಸುವ ಮನಸ್ಸು ಮಾಡಲೇ ಇಲ್ಲ…
ತಾಯಿಹೃದಯ ಮಗಳ ದಾರಿಯನ್ನೇ ಕಾಯ್ತಾ ಕಾಯ್ತಾ ಮಗಳ ಫೋಟೋ ಕೈಯಲ್ಲಿ ಹಿಡಿದು ಸ್ವರ್ಗ ಕಂಡಿತು..
ಶ್ರದ್ದಾಗೆ ಹೊಸ ನಂಬರ್ ನಿಂದ ಕರೆ ಬಂತು. ತಾಯಿ ಅಸುನೀಗಿದ ಸುದ್ದಿ ಕೇಳಿ ಗಂಡನ ಜೊತೆ ಕೂಡಲೇ ಬಂದಳು.ಎಷ್ಟಾದ್ರೂ ಹೆಣ್ಣಲ್ಲವೇ.. ತಾಯಿ ಹಿಡಿದ ತನ್ನ ಫೋಟೋ ನೋಡಿ ಅಮ್ಮನ ಮಡಿಲ ಮಗುವಾಗಿ ಆಕೆಯ ಆರೋಗ್ಯವನ್ನೇ ಮರೆತುಬಿಟ್ಟೆ.. ಕಾನ್ಸರ್ ಎಂದು ಗೊತ್ತಿದ್ರು ನನ್ನ ಗಂಡನ ಬಳಿ ಹೇಳಿ ಆಕೆಯ ಜೀವ ಉಳಿಸೋ ಚಿಕ್ಕ ಪ್ರಯತ್ನ ನು ಮಾಡಿಲ್ಲ… ಎಂದು ಮತ್ತೆ ಅಳತೊಡಗಿದಳು..ಶ್ರದ್ದಾ ಳ ಮದುವೆ ದಿನ ತಾಯಿ ಉಡುಗೊರೆ ನೀಡಿದ್ದರು… ಆದ್ರೆ ಅಮ್ಮನ ಬಳಿ ಹಣವೇ ಇರ್ಲಿಲ್ಲ.. ನನಗಿಷ್ಟ ಅಂತ ಅದೇ ಗಾಜಿನ ಬಳೆಯನ್ನು ಉಡುಗೊರೆ ಕೊಟ್ಟಿರಬೇಕು.. ಆಮೇಲೆ ನೋಡೋಣ ಎಂದು ನೋಡದೆ ಗಿಫ್ಟ್ ಬಾಕ್ಸ್ ನ್ನು ಅಲ್ಲೇ ಕಪಾಟಿನಲ್ಲಿ ಎಸೆದಿದ್ದಳು.ತಾಯಿಯ ನೆನಪಾಗಿ ಆಕೆ ಕೊಟ್ಟ ಉಡುಗೊರೆ ನೋಡಲೆಂದು ಕಪಾಟನ್ನು ತೆರೆದಾಗ ” ಚಿನ್ನದ ಉಂಗುರ.., ಜೊತೆಗೆ “ಪತ್ರ ” ಕಂಡು ತೆರೆದು ಕಾತರದಿಂದ ಓದಿದಳು..ಅದ್ರಲ್ಲಿ ಹೀಗಿತ್ತು… ??????
“ಅಮ್ಮು.. ಈ ಉಡುಗೊರೆ ಬಹಳ ಚಿಕ್ಕದು.. ಮದುವೆ ಖರ್ಚುಗಾಗಿ ಕೂಡಿಟ್ಟ ಸ್ವಲ್ಪ ಹಣ ಸಾಕಾಗದೆ ಮಾಂಗಲ್ಯ ಮಾರಿದೆ. ಅದ್ರಲ್ಲಿ ಸ್ವಲ್ಪ ಹಣ ಉಳಿಸಿ ಈ ಉಂಗುರ ತಗೊಂಡೆ ಮಗ.. ಬೇಜಾರ್ ಮಾಡ್ಬೇಡವ್ವ.. ನನಗೆ ನೀನೇ ಆಸ್ತಿ..ಬರ್ತಾ ಇರು ಮಗ.. ನೀನಿಲ್ಲದ ಒಂದು ದಿನವನ್ನು ಕಲ್ಪನೆ ಕೂಡ ಮಾಡಿಲ್ಲ… ನೀನ್ ನನ್ನ ಮರಿಯಲ್ಲ ಅಂತ ಗೊತ್ತಿದೆ ಪುಟ್ಟ.. ಆದ್ರೂ ಮೊದಲನೇ ಬಾರಿ ಹೇಳ್ತಿದೀನಿ.. ನಿನ್ನ ಮಡಿಲಲ್ಲೆ ಮಗುವಂತೆ ಮಲಗಿ ಸಾಯೋ ಆಸೇನಮ್ಮ.. …”…
ಮಾತೆಲ್ಲಾ ಮೌನವಾಗಿತ್ತು.. ತಾಯಿಯ ನಿಷ್ಕಲ್ಮಶ ಹೃದಯ ವೈಶಾಲ್ಯತೆ, ತನ್ನ ಕೆಟ್ಟ ವರ್ತನೆಗಳು, ಅಮ್ಮನನ್ನು ಎನಿಸುತ್ತ ಅಲ್ಲೇ ಕುಸಿದಳು.
ತೆರೆದು ಓದದ ಪತ್ರದಲ್ಲಿ ತಾಯಿಯ ಉಸಿರೇ ಇತ್ತು.. ಅಲ್ವಾ…!!!!
ಪ್ರೀತಿಯ ಓದುಗರೇ..ಎಷ್ಟೇ ಸಿರಿವಂತಿಕೆ ಇದ್ದರೂ ಹೆತ್ತವರ ಸಲಹದೆ ಬೀದಿ ಪಾಲು ಮಾಡುವ ಅದೆಷ್ಟೋ ಜನರನ್ನು ನೋಡಿದ್ದೇವೆ… ಅಂತಹ ನೂರು ಮಕ್ಕಳಿಗಿಂತ ಕೊನೆಗಾಲ ದಲ್ಲಿ ಜೊತೆಯಿದ್ದು ಪ್ರೀತಿಯಿಂದ 4 ದಿನ ಸೇವೆ ಮಾಡುವ ಒಬ್ಬ ಮಗ /ಮಗಳಿದ್ದರೂ ಆ ಜೀವಗಳು ಸಾರ್ಥಕ ಭಾವದಿಂದ ತೃಪ್ತರಾಗುತ್ತಾರೆ.. ನಾವೆಲ್ಲರೂ ಹೃದಯಶ್ರೀಮಂತರಾಗೋಣ ….!!!