ಕೋವಿಡ್ ನಿಯಾಮವಳಿಯನ್ನು ಉಲ್ಲಂಘನೆ ಮಾಡುವುದನ್ನು ತಪ್ಪಿಸಲು ದಕ್ಷಿಣ ಕನ್ನಡದಲ್ಲಿ ಕೋವಿಡ್ ನಿಯಾಮವಳಿಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.
ಪ್ರಸ್ತುತ ಇರುವ ಕೋವಿಡ್ ಪಾಸಿಟಿವ್ ಇರುವ ವ್ಯಕ್ತಿಗಳಿಗಿರುವ ಹೋಮ್ ಐಸೊಲೇಶನ್ ವ್ಯವಸ್ಥೆಯನ್ನು ರದ್ದುಗೊಳಿಸಿ ಗ್ರಾಮೀಣ ಮತ್ತು ನಗರದ ಸ್ಲಂ ಏರಿಯಾಗಳಲ್ಲಿರುವ ಸೋಂಕಿತರು ಇನ್ನು ಮುಂದೆ ಸರಕಾರಿ ಕೋವಿಡ್ ಕೇರ್ ಸೆಂಟರ್ ಗಳಲ್ಲೇ ಚಿಕಿತ್ಸೆ ಪಡೆದುಕೊಳ್ಳುವಂತೆ ಸರ್ಕಾರ ಆದೇಶಿಸಿದೆ.
ಹೋಮ್ ಐಸೊಲೇಶನ್‌ನಲ್ಲಿರುವವ ಕೆಲವರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುತ್ತಿರುವುದರ ಕುರಿತು ದೂರುಗಳು ಬಂದ ನಂತರ ಹಾಗೂ ಕೆಲವು ಸೋಂಕಿತರು ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುವಾಗ ನೀಡಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದೆ ತಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದಾಗ ಐಸಿಯು ಅಥವಾ ವೆಂಟಿಲೇಟರ್ ಬೆಡ್ ಕೇಳುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುವಾಗ ಅವರು ನಿಗದಿತ ನಿಯಮಗಳನ್ನು ಪಾಲಿಸುತ್ತಾರೆಯೇ ಇಲ್ಲವೇ ಎಂಬ ಸಂಶಯವಿರುವುದರಿಂದ ರಾಜ್ಯ ಸರಕಾರದ ಆದೇಶದಂತೆ ಕೋವಿಡ್ ಪಾಸಿಟಿವ್ ಆದವರನ್ನು ಸರಕಾರಿ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸುವ ನಿರ್ಧಾರವನ್ನು ಜಿಲ್ಲೆಯಲ್ಲೂ ಮಾಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಪಾಸಿಟಿವ್ ಆದವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 12 ಸಾವಿರ ಮಂದಿ (ಒಟ್ಟು ಸೋಂಕುಪೀಡಿತರಲ್ಲಿ ಶೇ.87) ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,100 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕೇರ್ ಸೆಂಟರ್ ಗಳಿದ್ದು, ಸುಮಾರು 2 ಸಾವಿರ ಮಂದಿಗೆ ವ್ಯವಸ್ಥೆ ಇದೆ. ಅಲ್ಲಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಸ್ವಲ್ಪ ಗಂಭೀರ ಸ್ಥಿತಿಯಲ್ಲಿರುವವರನ್ನು ಕೂಡಲೇ ಸ್ಥಳಾಂತರಿಸಲಾಗುವುದು. ಅಗತ್ಯ ಬಿದ್ದರೆ ಇನ್ನಷ್ಟು ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೆಲದಿನಗಳ ಹಿಂದೆ ಗ್ರಾ.ಪಂ.ಪಿಡಿಓ ಒಬ್ಬರೂ ಕೋವಿಡ್ ಪಾಸಿಟಿವ್ ಆದರೂ ಮನೆಯಲ್ಲೇ ಇರುವ ಸೂಚನೆಯನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಇರುವುದನ್ನು ಗಮನಿಸಿದ ಸಾರ್ವಜನಿಕರು ಜಿ.ಪಂ.ಸಿಇಓ ಅವರಿಗೆ ದೂರು ನೀಡಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾಡಿದರೆ ಸಾಮಾನ್ಯರ ಪಾಡೇನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದರು.ಒಟ್ಟಿನಲ್ಲಿ ಹೊಸನೀತಿಯಿಂದ ಪಾಸಿಟಿವ್ ಆದವರು ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗುವುದು ಅನಿವಾರ್ಯವಾಗಲಿದೆ.
ಈಗಾಗಲೇ ತಾಲೂಕು ಕೇಂದ್ರಗಳು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಮಾಡಬಹುದಾದ ಸ್ಥಳಗಳನ್ನು ಗುರುತಿಸಿ ಇಟ್ಟಿದ್ದಾರೆ. ಅದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಕುಳಿತಿದ್ದು, ಜಿಲ್ಲಾಡಳಿತದ ಲಿಖಿತ ಆದೇಶ ಬಂದ ಕೂಡಲೇ ಮುಂದಕ್ಕೆ ಹೋಂ ಕ್ವಾರಂಟೈನ್ ಇರೋದಿಲ್ಲ, ಸಾಂಸ್ಥಿಕ ಕ್ವಾರಂಟೈನ್ ಅನಿವಾರ್ಯ ಆಗಲಿದೆ.