ಮಂಗಳೂರು : ಕೊರೋನಾ ಲಾಕ್ ಡೌನ್ ನಡುವಲ್ಲೇ ವಿದ್ಯುತ್ ದರ ಏರಿಕೆ ಪ್ರಸ್ತಾಪ ಕೇಳಿ ಬಂದಿದ್ದು, ದರ ಏರಿಕೆಯಿಂದ ಗ್ರಾಹಕರಿಗೆ ಶಾಕ್ ಕಾದಿದೆ. ಆ ಮೂಲಕ ವಿದ್ಯುತ್ ಬಳಕೆದಾರರಿಗೆ ಕೊರೋನಾ ಸಂಕಷ್ಟದ ನಡುವೆ ಗಾಯದ ಮೇಲೆ ಬರೆ ಎಳೆದ ಅನುಭವವಾಗುವ ಸಾಧ್ಯತೆ ಇದೆ.
ಪ್ರತಿ ಯುನಿಟ್ ಗೆ 1.67 ರೂ. ಹೆಚ್ಚಳಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ಆಯೋಗದ ಮುಂದೆ ಮೆಸ್ಕಾಂ ಬೇಡಿಕೆ ಇಟ್ಟಿದೆ. ಲಾಕ್ ಡೌನ್ ಅಂತ್ಯಗೊಂಡಾಕ್ಷಣ ದರ ಹೆಚ್ಚಳ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಕಳೆದ ವರ್ಷ ಎಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಪ್ರತಿ ಯುನಿಟ್ ಗೆ 40 ಪೈಸೆ ಹೆಚ್ಚಳವಾಗಿತ್ತು. ಇದೀಗ ಮತ್ತೆ ಮೆಸ್ಕಾಂ ದರ ಹೆಚ್ಚಳದ ಪ್ರಸ್ತಾಪವಿಟ್ಟಿದೆ. ಆದರೆ, ಕೆ ಇಆರ್ ಸಿ ಎಷ್ಟು ಏರಿಕೆ ಮಾಡಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ.
ದರ ಇಳಿಕೆಗೆ ಸಾರ್ವಜನಿಕರಿಂದ ಆಗ್ರಹ:
ಇನ್ನೊಂದೆಡ ಈಗಾಗಲೇ ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ. ಕೊರೋನಾ, ಲಾಕ್ ಡೌನ್, ಉದ್ಯೋಗ ನಷ್ಟ ಇತ್ಯಾದಿ ಸಮಸ್ಯೆಗಳಲ್ಲಿ ಸಾರ್ವಜನಿಕರಿದ್ದಾರೆ. ಇವುಗಳ ಜೊತೆಯಲ್ಲೇ ಮತ್ತೆ ವಿದ್ಯುತ್ ದರ ಏರಿಕೆ ಬೇಡ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಸ್ತುತ ಇರುವ ದರವನ್ನು ಕೂಡ ಕಡಿಮೆ ಮಾಡಬೇಕೆಂದು ಆಗ್ರಹಗಳು ಕೇಳಿ ಬರುತ್ತಿವೆ. ಹಾಗೂ ಜಿಲ್ಲಾಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಸಾರ್ವಜನಿಕರು ದರ ಇಳಿಕೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಮತ್ತೆ ಬೆಲೆ ಏರಿಕೆಗೆ ಪ್ರಸ್ತಾಪವಿಟ್ಟಿರುವ ಮೆಸ್ಕಾಂ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ.