ಮಂಗಳೂರು: ಕೊರೋನ ಸಂಕಷ್ಟದ ನಡುವೆಯೂ ದಕ್ಷಿಣ ಕನ್ನಡ ಹಾಲು ಒಕ್ಕೂಟವು ಗ್ರಾಹಕರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಹಾಲು ದಿನಾಚರಣೆಯ ದಿನವಾದ ಜೂನ್ 1 ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ 1 ಲೀಟರ್ ಹಾಲಿಗೆ 40 ಎಂ.ಎಲ್ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ ನೀಡಲಿದೆ. ಈ ಆಫರ್ ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿಯೂ ಲಭ್ಯ ಇರಲಿದ್ದು,ಅರ್ಧ ಲೀಟರ್‌ಗೆ 20 ಎಂ.ಎಲ್ ಹಾಲನ್ನು ಉಚಿತವಾಗಿ ನೀಡಲಿದೆ.
1 ಲೀಟರ್ ಹಾಲಿನ ಬೆಲೆಗೆ 1 ಲೀಟರ್ 40 ಎಂ.ಎಲ್. ದೊರಕಲಿದೆ. ಹೆಚ್ಚುವರಿ ಹಾಲನ್ನು ಆ ಪ್ಯಾಕೆಟ್‌ನಲ್ಲೇ ತುಂಬಿಸಿ ಗ್ರಾಹಕರಿಗೆ ಉಚಿತವಾಗಿ ನೀಡಲಿದೆ. ಗ್ರಾಹಕರು ನಿಗದಿತ ಲೀಟರ್‌ಗೆ ಮಾತ್ರ ಈಗಿನಂತೆ ದರ ಪಾವತಿಸಿದರೆ ಸಾಕಾಗುತ್ತದೆ. ಪ್ರಸಕ್ತ ಲಾಕ್‌ಡೌನ್ ಇರುವುದರಿಂದ ಲೀಟರ್‌ಗಟ್ಟಲೆ ಹಾಲು ಒಕ್ಕೂಟಗಳಲ್ಲಿ ಶೇಖರಣೆಯಾಗುತ್ತಿದೆ. ಹಾಲು ಸಂಗ್ರಹ ನಿಲ್ಲಿಸಿದರೆ ಹೈನುಗಾರರಿಗೆ ತೊಂದರೆಯಾಗಲಿದೆ.ಆದ್ದರಿಂದ ಗ್ರಾಹಕರಿಗೆ ಉಚಿತವಾಗಿ 40% ಹಾಲು ನೀಡಲು ಒಕ್ಕೂಟ ನಿರ್ಧರಿಸಿದೆ.