ಪುತ್ತೂರು: ಇದು ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದಲ್ಲಿ ನಡೆದ ಕರುಳು ಹಿಂಡುವ ನೋವಿನ ಕಥೆ. ಮನೆ ಯಜಮಾನನ ಹೆಸರು ರುಕ್ಮಯ್ಯ ಗೌಡ. ತನ್ನ ಅಕ್ಕ ಮತ್ತು ಹೆಂಡತಿ, ಎರಡು ಮಕ್ಕಳ ಜೊತೆ ವಾಸವಾಗಿದ್ದರು. ಅಕ್ಕ ಮತ್ತು ರುಕ್ಮಯ್ಯ ಇಬ್ಬರ ಕಣ್ಣು ಕೂಡಾ ಈಗ ಮಂದವಾಗಿದೆ. ಯಾರೇ ಬಂದರೂ ಅವರನ್ನು ನೋಡಲಾಗದೇ ಸ್ವರದಲ್ಲೇ ಗುರುತು ಹಿಡಿಯಬೇಕಾದ ಪರಿಸ್ಥಿತಿ. ಇವರಿರುವ ಮನೆ ಜಾಗದಲ್ಲೂ ಭಾರೀ ಅನ್ಯಾಯ ಆಗಿದೆ ಎಂದು ಈ ಕುಟುಂಬದ ಕಣ್ಣೀರಿನ ಮಾತು ಕೇಳಿದಾಗ ಎಲ್ಲರಲ್ಲೂ ನೋವುಂಟಾಗುತ್ತದೆ. ಬಡತನದ ಕಾರಣಕ್ಕೆ ಒಂದೆಡೆ ಕಣ್ಣು ಸಮಸ್ಯೆ ಇನ್ನೊಂದೆಡೆ ಜಾಗದ ಸಮಸ್ಯೆ ಎದುರಿಸುತ್ತಿರುವ ಬಡ ಕುಟುಂಬದ ಹೃದಯ ವಿದ್ರಾವಕ ಸನ್ನಿವೇಶ ಎಂತವನನ್ನೂ ಧೃತಿಗೆಡಿಸುವಂತಿದೆ.
ಇಷ್ಟು ಮಾತ್ರವಲ್ಲದೇ ಇವರ ಮನೆಗೆ ನೀರಿನ ವ್ಯವಸ್ಥೆಯೂ ಇಲ್ಲ. ಇದೇ ರುಕ್ಮಯ್ಯ ಗೌಡರು 10ವರ್ಷಗಳ ಹಿಂದೆ ಸಾಮಾಜಿಕವಾಗಿ ಕೆಲಸ ಮಾಡಿದವರು. ಬೆಳ್ತಂಗಡಿ ನಾಗರೀಕ ಟ್ರಸ್ಟ್ ಇದರ ಪುತ್ತೂರು ತಾಲೂಕು ಕಾರ್ಯದರ್ಶಿ ಯಾಗಿ ಅನೇಕ ಪರಿಸರ ಸ್ನೇಹಿ ಕಾರ್ಯಕ್ರಮ ನಡೆಸಿದವರು. ಸಮಾಜದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರು ಕೂಡ ಹೌದು. ಆದರೆ ಅವರ ಬದುಕಿನಲ್ಲಿ ವಿಧಿಯ ಆಟ ಬೇರೆಯೇ ಇತ್ತು. ಕಡು ಬಡತನ ಅವರ ಅರೋಗ್ಯ ಮತ್ತು ದೃಷ್ಠಿ ಯನ್ನು ಕಳೆದುಕೊಳ್ಳುವಂತೆ ಮಾಡಿತು.ಈಗ ನಾನು ಈ ರೀತಿ ಬದುಕು ಮಾಡುವ ಬದಲು ದಯಾಮರಣವೇ ಲೇಸು ಎನ್ನುವ ರುಕ್ಮಯ್ಮ ಗೌಡರ ಅಂತರಾಳದ ಮಾತು ಕೇಳಿದಾಗ ಯಾರಿಗಾದರೂ ವೇದನೆಯಾಗದೆ ಇರದು.ತಾನು ಕೆಲಸ ಮಾಡಿದ ಸಂಸ್ಥೆ,ತನ್ನ ಜಾತಿ ಸಂಘಟನೆಗಳು ಕೂಡ ನನ್ನ ಪರಿಸ್ಥಿತಿ ಗೊತ್ತಿದ್ದೂ ಸಹಕಾರ ಕೊಡದ ಬಗ್ಗೆ ನೋವು ಈ ಬಡ ಹೃದಯ ದಲ್ಲಿ ಇನ್ನೂ ಇದೆ.
ಆದರೆ ಇದೀಗ ಈ ದುರಂತ ಕಥೆಯ ಬಗ್ಗೆ ತಿಳಿದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಮುಂಡೂರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ,ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಸುಧಾಕರ ಕುಲಾಲ್ ನೇತೃತ್ವದಲ್ಲಿ ಜನಪ್ರತಿನಿದಿಗಳು ಮತ್ತು ಸಾಮಾಜಿಕ ಸಂಘಟನೆ ಶ್ರೀರಾಮ ಗೆಳೆಯರ ಬಳಗದ ಸದಸ್ಯರು ರುಕ್ಮಯ್ಯ ಗೌಡರ ಮನೆಗೆ ಭೇಟಿ ನೀಡಿ ಸಾಂತ್ವನ ಮಾಡಿದರು. ಈ ಸಂದರ್ಭದಲ್ಲಿ ಶ್ರೀರಾಮ ಗೆಳೆಯರ ಬಳಗದ ಪರವಾಗಿ ಅರುಣ್ ಕುಮಾರ್ ಪುತ್ತಿಲ ಜಿನಸಿ ಸಾಮಗ್ರಿಗಳನ್ನು ನೀಡಿದರು.ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು,ಮುಂಡೂರ್ ಗ್ರಾಮಪಂಚಾಯಿತಿ ಅಧ್ಯಕ್ಷರು ಮತ್ತು ನಿಯೋಗದಲ್ಲಿದ್ದ ಮುಂಡೂರ್ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ,ಅಶೋಕ್ ಕುಮಾರ್ ಪುತ್ತಿಲ,ಶ್ರೀಮತಿ ಅರುಣಾ ಕಣ್ಣರ್ನೂಜಿ ಅವರು ಅವಶ್ಯಕತೆ ಗೆ ಧನ ಸಹಾಯ ನೀಡಿದರು. ಹಾಲು ಉತ್ಪಾದಕರ ಸಂಘದ ನಿರ್ದೇಶಕ ಅನಿಲ್ ಕಣ್ಣರ್ನೂಜಿ,ಶ್ರೀಧರ ನಾಯ್ಕ್ ಪುತ್ತಿಲ,ಧನಂಜಯ ಕಲ್ಲಮ, ಪುರಂದರ ಗೌಡ,ಪ್ರದೀಪ್,ಅಶೋಕ್ ನಾಯ್ಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಕುಟುಂಬಕ್ಕೆ ಸಹೃದಯಿ ಬಂದುಗಳ ಅಭಯ ಹಸ್ತದ ಅವಶ್ಯಕತೆ ಇನ್ನೂ ಬಹಳಷ್ಟಿದೆ. ನೊಂದ ಕುಟುಂಬಕ್ಕೆ ಆಸರೆಯ ಕೈಗಳಿಗಾಗಿ ಈ ಬಡಜೀವಗಳು ಕಾಯುತ್ತಿವೆ..