ಪುತ್ತೂರು: ನಮ್ಮ ಸಂಬಂಧಿಕರು ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೃಷಿ ಹಾಳು ಮಾಡಿ ನಮಗೆ ಹಲ್ಲೆ ನಡೆಸಿದ್ದಾರೆ ಎಂದು ದಂಪತಿ ಆರೋಪಿಸಿರುವ ಮತ್ತು ನಮ್ಮ ಜಾಗದಲ್ಲಿ ಅಕ್ರಮವಾಗಿ ಗಡಿ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ದಂಪತಿ ನನಗೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾ.ಪಂ. ಸದಸ್ಯರೋರ್ವರು ಆರೋಪ ಹೊರಿಸಿ ಪರಸ್ಪರ ದೂರು ನೀಡಿದ್ದರಿಂದ ಕೌಂಟರ್ ಕೇಸು ದಾಖಲಾದ ಘಟನೆ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಡಿಯಡ್ಕ ಎಂಬಲ್ಲಿ ಜೂನ್ 6ರಂದು ಪರಸ್ಪರ ಹೊಡೆದಾಟ ನಡದ ಬಗ್ಗೆ ಕೇಸು ದಾಖಲಾಗಿದ್ದು ಇತ್ತಂಡದ ಮೂವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂವರು ಆಸ್ಪತ್ರೆಗೆ ದಾಖಲು:
ಕೋಡಿಯಡ್ಕ ನಿವಾಸಿ ಅಶ್ರಫ್ ನಿಜಾಮಿ ಕೆ. ಎ. ಮತ್ತು ಅವರ ಪತ್ನಿ ಮಿಶ್ರಿಯರವರು ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನೆಟ್ಟಣಿಗೆ ಗ್ರಾ.ಪಂ ಸದಸ್ಯ ಜಾಫರ್ ಅವರು ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪರಸ್ಪರ ಆರೋಪ ಹೊರಿಸಿ ದೂರು ನೀಡಲಾಗಿದ್ದು, ಇತ್ತಂಡದ ವಿರುದ್ಧ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗಕ್ಕೆ ಅಕ್ರಮ ಪ್ರವೇಶಿಸಿ ಹಲ್ಲೆ: ನಮ್ಮ ಕುಮ್ಮಿ ಜಾಗಕ್ಕೆ ಆಕ್ರಮವಾಗಿ ಪ್ರವೇಶಿಸಿದ ನನ್ನ ಮಾವ ಖಾದರ್, ಅವರ ಪುತ್ರ ರಫೀಕ್, ರಫಿಕ್ ಅವರ ಪತ್ನಿ ಕುಂಞ ಅಮೀನಾ ಮತ್ತು ಸಂಬಂಧಿಕ ಜಾಫರ್ ಅವರು ನನಗೆ ಹಲ್ಲೆ ನಡೆಸುತ್ತಿದ್ದ ವೇಳೆ ನನ್ನ ಪತ್ನಿ ಅಡ್ಡ ಬಂದಾಗ ಆಕೆಗೂ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಆರೋಪಿಗಳ ಪೈಕಿ ಖಾದರ್ ಮತ್ತು
ಜಾಫರ್ ನನ್ನ ಪತ್ನಿಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಮಿತಿಯ ಅವರ ಗಂಡ ಅಶ್ರಫ್ ನಿಜಾಮಿ ಕೆ.ಎ. ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಜಮೀನಿಗೆ ಅಕ್ರಮ ಗಡಿ ನಿರ್ಮಾಣ ಪ್ರಶ್ನಿಸಿದಕ್ಕೆ ಹಲ್ಲೆ:
ನಮ್ಮ ಸಂಬಂಧಿಕರ ಜಮೀನಿನ ಗಡಿಯಲ್ಲಿ ಜಮೀನು ಸ್ವಾಧೀನ ಪ್ರಕರಣ ಇತ್ಯರ್ಥ ಆಗದಿದ್ದರೂ ಆಕ್ರಮವಾಗಿ ಗಡಿ ನಿರ್ಮಾಣ ಮಾಡುತ್ತಿರುವುದನ್ನು ನಾನು ಪ್ರಶ್ನಿಸಿದಾಗ ಅಶ್ರಫ್ ಮತ್ತು ಅವರ ಪತ್ನಿ ಮಿಶ್ರಿಯ ಅವರು ನನಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆಂದು ಜಾಫರ್
ಆರೋಪಿಸಿದ್ದಾರೆ.