ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ನೆರೆ, ಸಾಕಷ್ಟು ಹಾನಿ ಉಂಟಾಗಿದೆ. ಈ ಹಿನ್ನೆಲೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿರಂತರ ಮಳೆಯಿಂದ ತತ್ತರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ನೆರೆ ಪೀಡಿತ ಪ್ರದೇಶಕ್ಕೆ ಉಸ್ತುವಾರಿ ಸಚಿವರು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು ಸಂಪೂರ್ಣವಾಗಿ ಮನೆ ಕಳೆದುಕೊಂಡಿರುವವರಿಗೆ ಎನ್.ಡಿ.ಆರ್. ಎಫ್., ಎಸ್.ಡಿ.ಆರ್.ಎಫ್. ವತಿಯಿಂದ 1 ಲಕ್ಷದ 20 ಸಾವಿರ ರೂ., ಜೊತೆಗೆ ರಾಜ್ಯ ಸರಕಾರದ ವತಿಯಿಂದ ಹಲವು ಯೋಜನೆಗಳನ್ನು ಒಟ್ಟು ಸೇರಿಸಿ ಪೂರ್ತಿ ಮನೆ ನಿರ್ಮಾಣ ಮಾಡಿಕೊಡಲಾಗುವುದು, ಅದೇ ರೀತಿ ಭಾಗಶ ಹಾನಿಗೊಂಡಿರುವ ಮನೆಗಳಿಗೆ ಎನ್.ಡಿ.ಆರ್. ಎಫ್., ಎಸ್.ಡಿ.ಆರ್.ಎಫ್. ವತಿಯಿಂದ 6,500 ಸಾವಿರ ನೀಡುತ್ತಿದ್ದು, ಅದಕ್ಕೆ ರಾಜ್ಯ ಸರಕಾರದಿಂದ 43,500 ರೂ. ಸೇರಿಸಿ ಒಟ್ಟು 50,000 ರೂ. ಗಳನ್ನು ನೀಡಲಾಗುವುದು, ಯಾವುದೇ ದಾಖಲಾತಿ ಇಲ್ಲದಿದ್ರೆ ಅಂತವರಿಗೆ 1,00000 ರೂ. ನೀಡಲಾಗುವುದು ಎಂದರು.
ಬಿಜೆಪಿ ಸರಕಾರವಿದ್ದ ಸಮಯದಲ್ಲಿ 5 ಲಕ್ಷ ರೂ. ನೀಡುವ ಯೋಜನೆ ತಂದ ವೇಳೆ ಅದರಲ್ಲಿಯೂ ಹಲವಾರು ಅವ್ಯವಹಾರಗಳು ನಡೆದಿದೆ ಎಂದರು.
ಈ ಹಿಂದಿನ ಸರಕಾರವಿದ್ದ ಸಮಯದಲ್ಲಿ ಮೂರು ಹಂತಗಳನ್ನು ಮಾಡಿದ್ದು, ಈಗ ನಮ್ಮ ಸರಕಾರ ಅವುಗಳನ್ನು ತೆಗೆದು ಎರಡೇ ಹಂತಗಳನ್ನು ಮಾಡಿದ್ದೇವೆ ಎಂದರು.
ಜಿಲ್ಲಾಡಳಿತ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಪ್ರಕೃತಿ ವಿಕೋಪದ ಸಮಯದಲ್ಲಿ ಕೆಲ ಕಾರ್ಯಗಳನ್ನು ಯಾರ ಕೈಯಲ್ಲೂ ಮಾಡಲಾಗುವುದಿಲ್ಲ. ಸಂಕಷ್ಟದಲ್ಲಿರುವವರ ಜೊತೆ ನಿಲ್ಲುವ ಕೆಲಸವನ್ನು ನಾವು ಯಾವಾಗಲೂ ಮಾಡುತ್ತೇವೆ ಎಂದರು.
ಮೂಡ ಹಗರಣ ಕುರಿತು ಬಿಜೆಪಿ ಕೈಗೊಂಡಿರುವ ಪಾದಯಾತ್ರೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.