ಪುತ್ತೂರು : ರಸ್ತೆಗೆ ಹಾಕಿರುವ ಡಾಂಬರುಗಳೆಲ್ಲಾ ಕಿತ್ತು ಹೋಗಿದ್ದು, ರಸ್ತೆ ತುಂಬೆಲ್ಲಾ ಅಪಾಯಕಾರಿ ಹೊಂಡಗಳು ನಿರ್ಮಾಣವಾಗಿದೆ.
ಪುತ್ತೂರು ಮುಖ್ಯರಸ್ತೆಯಲ್ಲಿಯೇ ಹಲವಾರು ಅಪಾಯಕಾರಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಸಂಕಷ್ಟದಲ್ಲಿಯೇ ವಾಹನ ಚಾಲನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೊಂಡಗಳನ್ನು ತಪ್ಪಿಸಲು ಹೋಗಿ ಅಪಘಾತವಾಗುವ ಸಂಭವವು ಹೆಚ್ಚಿದೆ.
ಕೆಲ ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿದ್ದು, ವಿಪರೀತ ಮಳೆಯಿಂದಾಗಿ ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಳ್ಳುತ್ತಿದ್ದು, ವಾಹನ ಸವಾರರು ಈ ವೇಳೆ ರಸ್ತೆಯಲ್ಲಿರುವ ಹೊಂಡಗಳ ಬಗ್ಗೆ ಅರಿವಾಗದೆ ಚಲಿಸಿದರೆ, ವಾಹನ ಹೊಂಡಕ್ಕೆ ಬಿದ್ದು ಅಪಾಯ ಉಂಟಾಗುವ ಸಂಭವವಿದೆ.
ಎಪಿಎಂಸಿ ರಸ್ತೆಯಲ್ಲಿ, ದರ್ಬೆ ಸರ್ಕಲ್ ಬಳಿ, ಧನ್ವಂತರಿ ಆಸ್ಪತ್ರೆ ಬಳಿ, ಕಲ್ಲಾರೆ ಕಾನಾವು ಕ್ಲಿನಿಕ್ ಮುಂಭಾಗದ ರಸ್ತೆ, ಮೀನು ಮಾರ್ಕೆಟ್ ಮುಂಭಾಗದ ರಸ್ತೆಯಲ್ಲಿ, ಹರ್ಷದ ಮುಂಭಾಗ, ಬೊಳ್ವಾರ್ ಸರ್ಕಲ್ ಬಳಿ ಹಾಗೂ ಇನ್ನು ಹಲವು ಪ್ರಮುಖ ರಸ್ತೆಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಾ ಹೊಂಡಗಳು ಬಾಯ್ತೆರೆದು ನಿಂತಿವೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಶೀಘ್ರ ಪರಿಶೀಲನೆ ನಡೆಸಿ ಅಪಾಯಕಾರಿ ಹೊಂಡಗಳ ದುರಸ್ಥಿ ನಡೆಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.