ನಗರದ ಪಾಂಡೇಶ್ವರದ ಪಬ್ ವೊಂದಕ್ಕೆ ಬಂದಿದ್ದ ಯುವತಿಗೆ ಯುವಕರ ತಂಡವೊಂದು ಕಿರುಕುಳ ನೀಡಿ ನಿಂದನೆ ಮಾಡಿದ ಪ್ರಕರಣದಲ್ಲಿ ನಾಲ್ವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32), ಪ್ರಿತೇಶ್ (33) ಬಂಧಿತ ಆರೋಪಿಗಳು.
ನಗರದ ಪಾಂಡೇಶ್ವರದ ಮಾಲ್ ವೊಂದರಲ್ಲಿರುವ ಪಬ್ ಗೆ ಶನಿವಾರ ಯುವತಿಯೊಬ್ಬಳು ತನ್ನ ಗೆಳತಿ ಜತೆ ತೆರಳಿದ್ದರು. ಇದೇ ಪಬ್ ಗೆ ಪುತ್ತೂರಿನ ಯುವಕರ ತಂಡವೊಂದು ಬಂದು ಪಾರ್ಟಿಯಲ್ಲಿ ತೊಡಗಿತ್ತು. ಈ ವೇಳೆ ತಂಡದಲ್ಲಿದ್ದ ಯುವಕನೊಬ್ಬ ಯುವತಿಗೆ ಕಿರುಕುಳ ನೀಡಿದ್ದು, ಈ ಸಂದರ್ಭ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕ್ಯಾರೇ ಅನ್ನದ ಯುವಕರು ಯುವತಿ ಜತೆ ಅಸಭ್ಯವಾಗಿ ವರ್ತಿಸಿ ಅವರನ್ನು ಚುಡಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ವಿಷಯ ತಿಳಿದ ಪಾಂಡೇಶ್ವರ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಯುವತಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ಸಮಗ್ರ ತನಿಖೆ ನಡೆಸಿದ ಪೊಲೀಸರು ಪುತ್ತೂರಿನ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಒಬ್ಬನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರೆ, ಮೂವರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಿದೆ.