ಮುಕ್ಕೂರು : ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕೂರು ವಾರ್ಡ್ ನ ಕೋವಿಡ್ ನಿಯಂತ್ರಣ ಕಾರ್ಯಪಡೆಯ ದ್ವಿತೀಯ ಸಭೆ ಹಾಗೂ ಜಮೆ-ಖರ್ಚಿನ ಲೆಕ್ಕಚಾರದ ಮಂಡನೆ ಸಭೆಯು ಮುಕ್ಕೂರು ಶಾಲಾ ವಠಾರದಲ್ಲಿ ಜೂ.13 ರಂದು ನಡೆಯಿತು.
ಸಭಾ ಅಧ್ಯಕ್ಷತೆಯನ್ನು ವಹಿಸಿದ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಪೂರಕವಾಗಿ ಕಾರ್ಯಪಡೆಯು ಸಕ್ರೀಯವಾಗಿ ತೊಡಗಿದೆ. ಪ್ರಸ್ತುತ ಕಳೆದ ಎರಡು ವಾರಗಳಿಂದ ಮುಕ್ಕೂರು ವಾರ್ಡ್ ನಲ್ಲಿ ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಪ್ರತಿಯೊಬ್ಬರಿಗೆ ಲಸಿಕೆ ಹಾಕುವ ನಿಟ್ಟಿನಲ್ಲಿ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ. ಕೊರೊನಾ ಸೇರಿದಂತೆ ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಮುಕ್ಕೂರು ವಾರ್ಡ್ ನಲ್ಲಿ ತಂಡವಾಗಿ ಕೊರೊನಾ ನಿಯಂತ್ರಣಕ್ಕೆ ಮುಂದಡಿ ಇಟ್ಟು ಆಹಾರ ಕಿಟ್ ವಿತರಣೆ, ಪಲ್ಸ್ ಮೀಟರ್ ವಿತರಣೆ ಮಾಡುವ ಮೂಲಕ ಉತ್ತಮ ಕಾರ್ಯ ನಡೆದಿದೆ. ವಾರ್ಡ್‌ನಲ್ಲಿ ಆರ್ಥಿಕ ಸಂಕಷ್ಟಕ್ಕೆ ಈಡಾದ ಅರ್ಹ ಕುಟುಂಬಗಳನ್ನು ಗುರುತಿಸಿ ಅಂಥವರಿಗೆ ಪುಡ್ ಕಿಟ್ ನೀಡುವ ಬಗ್ಗೆ ಕಾರ್ಯಪಡೆ ಮೂಲಕ ಯೋಜನೆ ರೂಪಿಸೋಣ ಎಂದರು.
ನೋಟರಿ ನ್ಯಾಯವಾದಿ ಬಾಬು ಗೌಡ ಅಡತ್ಯಕಂಡ ಮಾತನಾಡಿ, ಲಸಿಕೆ ಲಭ್ಯತೆ ಬಗ್ಗೆ ಕಾರ್ಯಪಡಯೆ ವಾಟ್ಸಫ್ ಗ್ರೂಪ್ ನಲ್ಲಿ ಮಾಹಿತಿ ಸಿಕ್ಕ ತತ್‍ಕ್ಷಣ ಕಾರ್ಯಪಡೆ ಸದಸ್ಯರು ತಮ್ಮ ವ್ಯಾಪ್ತಿಯ ಸುತ್ತಲಿನ ಮನೆಮಂದಿಗೆ ಮಾಹಿತಿ ನೀಡಿ ಅವರು ಲಸಿಕೆ ಪಡೆದುಕೊಳ್ಳಲು ಸಹಕಾರ ನೀಡಬೇಕು. ಲಾಕ್ಡೌನ್ ಪರಿಣಾಮ ಆರ್ಥಿಕ ಸಮಸ್ಯೆ ಉಂಟಾಗಿರುವ ಕುಟುಂಬಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಅರ್ಹರನ್ನು ಗುರುತಿಸುವ ಕಾರ್ಯ ನಡೆಸೋಣ. ಒಂದು ತಂಡದ ರೀತಿಯಲ್ಲಿ ಕಾರ್ಯಪಡೆ ಸಕ್ರೀಯರಾಗುವ ಮೂಲಕ ಕೊರೊನಾ ಮುಕ್ತ ವಾರ್ಡ್ ನಿರ್ಮಾಣಕ್ಕೆ ಪಣ ತೊಟ್ಟಿರುವುದು ಶ್ಲಾಘನೀಯ ಎಂದರು.
ಪ್ರಗತಿಪರ ಕೃಷಿಕ ಸತ್ಯಪ್ರಸಾದ್ ಕಂಡಿಪ್ಪಾಡಿ ಮಾತನಾಡಿ, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ಅದರ ನಿಯಂತ್ರಣಕ್ಕೆ ಕಾರ್ಯಪ್ರವೃತ್ತಗೊಂಡಿರುವುದು ಒಂದು ಉತ್ತಮ ಕೆಲಸ. ಮುಂಬರುವ ದಿನಗಳಲ್ಲಿ ಕೊರೊನಾ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗ ಬಾರದ ಹಾಗೆ ಕಾರ್ಯಪಡೆಯು ಚಟುವಟಿಕೆಯಲ್ಲಿ ತೊಡಗಬೇಕು. ಲಸಿಕೆಯ ಅಗತ್ಯತೆ ಬಗ್ಗೆ ನಾವು ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಲಸಿಕೆ ಪಡೆಯಲು ಸಹಕಾರ ನೀಡೋಣ ಎಂದರು.
ಆಶಾ ಕಾರ್ಯಕರ್ತೆ ರಾಗಿಣಿ ಮಾತನಾಡಿ, ಪೆರುವಾಜೆ ಗ್ರಾ.ಪಂ.ನ ಮುಕ್ಕೂರು ವಾರ್ಡ್ ನಲ್ಲಿ ಕಳೆದ ಕೆಲ ದಿನಗಳಿಂದ ಯಾವುದೇ ಕೊರೊನಾ ಪ್ರಕರಣಗಳು ಕಂಡು ಬಂದಿಲ್ಲ. ಇಲ್ಲಿನ ಕಾರ್ಯಪಡೆ ಕೋವಿಡ್ ನಿಯಂತ್ರಣದ ಕಾರ್ಯದಲ್ಲಿ ನೆರವಾಗುವ ಮೂಲಕ ನಮ್ಮೊಂದಿಗೆ ಸಹಕಾರ ನೀಡಿದೆ. ಅತ್ಯಂತ ಜವಬ್ದಾರಿಯುತವಾಗಿ ಇಲ್ಲಿನ ಕಾರ್ಯಪಡೆ ಸ್ಪಂದಿಸುತ್ತಿರುವುದು ಪ್ರಶಂಸನೀಯ ಎಂದರು.
ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ, ರಮೇಶ್ ಕಾನಾವು, ಇಬ್ರಾಹಿಂ ಕುಂಡಡ್ಕ, ಶರೀಪ್ ಕುಂಡಡ್ಕ, ಮಹೇಶ್ ಕುಂಡಡ್ಕ, ವೆಂಕಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಪಡೆ ಸದಸ್ಯ ಜಯಂತ ಕುಂಡಡ್ಕ ಲೆಕ್ಕಚಾರ ಮಂಡಿಸಿ ನಿರೂಪಿಸಿದರು.