ಪುತ್ತೂರು: 2015 ರ ಮೇ 24 ರಂದು ಸುಳ್ಯದ ಎಣ್ಮೂರು ಮನೆಯಲ್ಲಿ ಮಲಗಿದ್ದ ಅಪ್ರಾಪ್ತೆ ಮಗಳ ಮೇಲೆ ಸ್ವತಃ ತಂದೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೋಕ್ಸೊ ವಿಶೇಷ ನ್ಯಾಯಾಲಯ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾರವರು ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ್ದಾರೆ.
ಸುಳ್ಯ ತಾಲೂಕಿನ ಎಣ್ಣೂರು ಗ್ರಾಮದ ನಾರಾಯಣ ನಾಯ್ಕ ಅವರು ಆರೋಪಿಯಾಗಿದ್ದು ಅವರು ಅವರ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಈ ಘಟನೆ ಬಗ್ಗೆ ಬಾಲಕಿಯ ತಾಯಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆತನ ವಿರುದ್ಧ ಭಾ.ದಂ.ಸಂ, ಕಲಂ 376, 504, 323 ಮತ್ತು ಪೋಕ್ಸೋ ಕಾಯ್ದೆ ಕಲಂ 4 ರಡಿ ಪ್ರಥಮ ವರ್ತಮಾನ ದಾಖಲಿಸಿ ತನಿಖೆ ನಡೆಸಿ ಅಂದಿನ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಬಿ.ಎಸ್.ಸತೀಶ್‌ರವರು ಆರೋಪಿತನ ವಿರುದ್ಧ ಸಮಗ್ರ ತನಿಖೆ ನಡೆಸಿ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪಿಯು ಬಾಲಕಿಯ ತಂದೆಯಾದ ಕಾರಣ ಮಾನ್ಯ ನ್ಯಾಯಾಲಯವು ವಿಚಾರಣಾ ಕಾಲಕ್ಕೆ ಪೋಕ್ಸೋ ಕಲಂ 6 ನ್ನು ಕೂಡಾ ಸೇರಿಸಿರುತ್ತದೆ. ಅಂತಿಮವಾಗಿ ಆರೋಪಿಯು ಬಾಲಕಿಯನ್ನು ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾಗಿ ಮಾನ್ಯ ನ್ಯಾಯಾಲಯವು ಅಭಿಪ್ರಾಯಪಟ್ಟು ಭಾ.ದಂ.ಸಂ. 376/511, 504, 323 ಮತ್ತು ಪೋಕ್ಸೋ ಕಾಯ್ದೆ ಕಲಂ 6 ಜೊತೆಗೆ 18 ರಡಿ ತಪ್ಪಿತಸ್ಥನೆಂದು ಜೂ.21ರಂದು ತೀರ್ಪು ನೀಡಿದ್ದು, ಆರೋಪಿಗೆ 5 ವರ್ಷ ಕಠಿಣ ಕಾರಾವಾಸದ ಶಿಕ್ಷೆ ಮತ್ತು ರೂ. 25,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಾದಾ ಸ್ವರೂಪದ ಶಿಕ್ಷೆಯನ್ನು ವಿಧಿಸಿದೆ. ಆರೋಪಿಯು ಬಾಲಕಿಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದ ಬಗ್ಗೆ 4 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 1,000/- ದಂಡ ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ ಪುನಃ 1 ತಿಂಗಳ ಸಾದಾ ಸ್ವರೂಪದ ಶಿಕ್ಷೆ ವಿಧಿಸಿದೆ. ಆರೋಪಿಯು ಬಾಲಕಿಯ ತಾಯಿಗೆ ಹಲ್ಲೆ ಮಾಡಿದ ಬಗ್ಗೆ 4 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 500/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 15 ದಿವಸಗಳ ಸಾದಾ ಸ್ವರೂಪದ ಶಿಕ್ಷೆ ವಿಧಿಸಿರುತ್ತದೆ.
ದಂಡದ ಮೊತ್ತದಲ್ಲಿ ರೂ. 25,000/- ವನ್ನು ಬಾಲಕಿಗೆ ನೀಡಲು ಮಾನ್ಯ ನ್ಯಾಯಾಲಯವು ಆದೇಶಿಸಿದೆ. ಮಾನ್ಯ ನ್ಯಾಯಾಲಯವು ಬಾಲಕಿಗೆ ದಂ.ಪ್ರ.ಸಂ. ಕಲಂ 357(ಎ) ಹಾಗೂ ಪೋಸ್ಕೋ ಕಾಯ್ದೆ ಕಲಂ 33(8) ಜೊತೆಗೆ ನಿಯಮ 7 ರಡಿ ರೂ.1,00,000/- ಲಕ್ಷ ಪರಿಹಾರ ನೀಡಲು ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಸರ್ಕಾರದ ಪರವಾಗಿ ಪೋಸ್ಕೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.