ಪುತ್ತೂರು : ಸ್ವಾತಂತ್ರ್ಯ
ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಗೌರವ ಸಲಹೆಗಾರ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊ೦ಡ ಪುತ್ತೂರು ಮೂಲದ ಸಾಹಿತಿ ಸಂಶೋಧಕ ಅನಂತರಾಜ ಗೌಡ ಪುತ್ತೂರು (81) ಅವರು ಏ.20ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಪಿ.ಎ ವೇದಾವತಿ, ಪತ್ರ ಹಿತೇಶ್ ಅವರನ್ನು ಆಗಲಿದ್ದಾರೆ.
ಅನಂತರಾಜ ಗೌಡ ಅವರು ಮಡಿಕೇರಿ ನಗರ ಮಾರುಕಟ್ಟೆ ಸಮೀಪ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದರು.
ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಗೆ ವಾಲಿದೆ. ಅನಂತರಾಜ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಆಗಲೇ ಅವರು ಮೃತಪಟ್ಟಿದ್ದರು.
ಪುತ್ತೂರಿನ ತೆಂಕಿಲಬೈಲು ದಿ.ದೊಡ್ಡಯ್ಯ ಗೌಡ ಮತ್ತು ಸೀತಮ್ಮ ಅವರ ಏಕಮಾತ್ರ ಪುತ್ರ ಅನಂತರಾಜ ಗೌಡ ಅವರು ಪಾಂಗ್ಲಾಯಿಯಲ್ಲಿ ಹುಟ್ಟಿ ಬೆಳೆದು ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನಲ್ಲೇ ಮಾಡಿದ್ದು, 1962ರ ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ (ಈಗಿನ ಸ.ಪ.ಪೂ ಪದವಿ ಪೂರ್ವ ಕಾಲೇಜು)ನ ಹಿರಿಯ ವಿದ್ಯಾರ್ಥಿ. ಆ ಬಳಿಕ ಮಂಗಳೂರಿನಲ್ಲಿ ಡಿಪ್ಲೊಮಾ ಮಾಡಿದ್ದ ಅವರು ಪ್ರಸ್ತುತ ಬೆಂಗಳೂರಿನ ಬಿ.ಟಿ.ಎಂ.ಲೇಔಟ್‌ನಲ್ಲಿ ವಾಸ್ತವ್ಯ ಹೊಂದಿದ್ದರು.



























