ಬೆಂಗಳೂರು:ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣ ರದ್ದುಕೋರಿ ಆರೋಪಿ ಕೃಷ್ಣ ಜೆ.ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಆರೋಪಿ ಕೃಷ್ಣ ಜೆ.ರಾವ್ ಪರ ಖ್ಯಾತ ವಕೀಲ ಪಿ.ಪಿ.ಹೆಗ್ಡೆ ಅವರು ವಾದ ಮಂಡಿಸಿ, ಅರ್ಜಿದಾರ ಯುವಕ ಮತ್ತು ಯುವತಿ ನಡುವೆ 7 ವರ್ಷಗಳ ಪ್ರೀತಿ ಇತ್ತು. ಕ್ರಿಮಿನಲ್ ಕೇಸ್ ನಿಂದಾಗಿ ರಾಜಿಯಾಗಿಲ್ಲ. ರಾಜಕೀಯ ವಿರೋಧಿಗಳು ಆರೋಪಿ ತಂದೆಯ ತೇಜೋವಧೆ ಮಾಡಿದ್ದಾರೆ. ಕ್ರಿಮಿನಲ್ ಕೇಸ್‌ನಲ್ಲೂ ಆರೋಪಿಗಳನ್ನಾಗಿಸಿದ್ದಾರೆ ಎಂದರು.
ಪ್ರತಿಕ್ರಿಯಿಸಿದ ಕೋರ್ಟ್, ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. ಯುವತಿ ಮತ್ತು ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ.ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿ ಕರ್ತವ್ಯ
ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಯುವತಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಲು ಸಿದ್ದರಿದ್ದಾರಾ ಎಂದು ಆರೋಪಿ ಪರ ವಕೀಲರಿಗೆ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಪ್ರಶ್ನಿಸಿದ್ದು, ಇದಕ್ಕೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.
























