ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ಅವರು ಆಮಾನತುಗೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,ಚರ್ಚೆಗೆ ಕಾರಣವಾಗಿದೆ. ಆದರೆ ಅಮಾನತು ಆದೇಶದ ಅಧಿಕೃತ ಪ್ರತಿ ಲಭ್ಯವಾಗಿಲ್ಲ.
ದೇವಸ್ಥಾನದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿರುವ ವಿಚಾರಕ್ಕೆ ಸಂಬಂಧಿಸಿದ ಆರೋಪದ ಹಿನ್ನೆಲೆಯಲ್ಲಿ ಕಾರ್ಯನಿರ್ವಹಣಾಧಿಕಾರಿಯವರನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅಮಾನತು ರದ್ದು : ಕಾರ್ಯನಿರ್ವಹಣಾಧಿಕಾರಿಯವರನ್ನು ಅಮಾನತು
ಮಾಡಿರುವುದು ನಿಜ. ಆದರೆ ಅದನ್ನು ರದ್ದುಗೊಳಿಸಿ ಆದೇಶವನ್ನು ಹಿಂಪಡೆಯಲಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಈ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ವಿಚಾರಿಸಿದಾಗ, ಯಾವುದೇ ಅಮಾನತು ಆದೇಶ ಬಂದಿಲ್ಲ.ಒಂದು ವೇಳೆ ಅಮಾನತು ಆದೇಶ ಹೊರಡಿಸಿದ್ದರೆ ಅದರ ಪ್ರತಿಯನ್ನು ನೀಡಲಿ.ಕಾರ್ಯನಿರ್ವಹಣಾಧಿಕಾರಿಯವರು ರಜೆಯಲ್ಲಿ ತೆರಳಿರುವುದನ್ನು ಅಮಾನತು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಈ ಕುರಿತು ಸ್ಪಷ್ಟನೆ ಪಡೆಯಲೆಂದು ಕಾರ್ಯನಿರ್ವಹಣಾಧಿಕಾರಿಕೆ.ವಿ.ಶ್ರೀನಿವಾಸ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಕರೆ ಸ್ವೀಕರಿಸಿಲ್ಲ.


























