ಸುಬ್ರಹ್ಮಣ್ಯ: ಯುವತಿಯೊಬ್ಬರನ್ನು ಕಾರಿನಲ್ಲಿ ಕರೆದೊಯ್ದು ಬಿಸಿಲೆ ಘಾಟಿ ಮಾರ್ಗದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ಘಟನೆ ನ.4ರ ರಾತ್ರಿ ನಡೆದಿದೆ.
ಕಡಬ ಕೊಣಾಜೆ ಗ್ರಾಮದ ಪ್ರಸಾದ್ ಎಂಬಾತ ಹಲ್ಲೆ ನಡೆಸಿದ ಆರೋಪಿ. ಸಂತ್ರಸ್ತ ಯುವತಿ ಹಾಗೂ ಆರೋಪಿಯ ನಡುವೆ ಕಳೆದ ಮೂರು ವರ್ಷಗಳಿಂದ ಪರಿಚಯ ಮತ್ತು ಸ್ನೇಹವಿತ್ತು ಎನ್ನಲಾಗಿದೆ.
ನ.4ರಂದು ಸಂಜೆ ಉಪ್ಪಿನಂಗಡಿಯಿಂದ ಯುವತಿಯನ್ನು ಕಾರಿನಲ್ಲಿ ಕರೆದೊಯ್ದ ಆರೋಪಿ, ಕುಲ್ಕುಂದ ಮಾರ್ಗವಾಗಿ ಬಿಸಿಲೆ ಘಾಟಿಗೆ ತೆರಳಿದ್ದಾನೆ. ಈ ವೇಳೆ ರಾತ್ರಿ ದಾರಿ ಮಧ್ಯೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ನಿಂದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯ ಪರಿಣಾಮ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ನ.5ರಂದು ಬೆಳಗ್ಗೆ ಪ್ರಜ್ಞೆ ಮರಳಿದ ಬಳಿಕ ಸುಬ್ರಹ್ಮಣ್ಯಕ್ಕೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. Zero-1/2026ರಂತೆ ಬಿಎನ್ಎಸ್ 2023ರ ಕಲಂ 118(1), 109(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕೃತ್ಯ ನಡೆದ ಸ್ಥಳ ಹಾಸನ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಪ್ರಕರಣವನ್ನು ಯೆಸಳೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಯೆಸಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.


























