ಬಂಟ್ವಾಳ: ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ನಿಷೇದಿತ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಡ್ರಗ್ಸ್ ಮಾಫಿಯಾವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 46 ಲಕ್ಷ ರೂ ಮೌಲ್ಯದ ಎಂ ಡಿ ಎಂ ಎ ಮಾದಕವಸ್ತು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೋಳಂತೂರು ಗ್ರಾಮದ ಎನ್.ಸಿ. ರೋಡ್ ನ ನಿಜಾಮುದ್ದಿನ್ (30) ಹಾಗೂ ಮಹಮ್ಮದ್ ಶಾಹಿಂ (19)ಬಂಧಿತ ಆರೋಪಿಗಳು.
ಕಳೆದ ಕೆಲ ಸಮಯಗಳಿಂದ ಬೆಂಗಳೂರಿನಿಂದ ಬಂಟ್ವಾಳ ಮೂಲಕ ದ.ಕ. ಜಿಲ್ಲೆಗೆ ಮಾದಕವಸ್ತು ಸರಬರಾಜಾಗುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನತ್ತಿದ ಪೊಲೀಸರು ಬಲೆ ಬೀಸಿದ್ದರು.
ಬೆಂಗಳೂರಿನಿಂದ ಬೊಲೆರೋ ವಾಹನದಲ್ಲಿ ಮಾದಕವಸ್ತು ಸಾಗಾಟವಾಗುತ್ತಿರುವ ಖಚಿತ ಮಾಹಿತಿ ಮೇರೆಗೆ, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರ ತಂಡ ಮಾರ್ನಬೈಲು ವಿನಿಂದ ಮಂಚಿ ಗ್ರಾಮದ ಪಂಜಾಲ ಕ್ರಾಸ್ ಎಂಬಲ್ಲಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ರೂ 46 ಲಕ್ಷ ಮೌಲ್ಯದ ಎಂ ಡಿ ಎಂ ಎ ಮಾದಕವಸ್ತು ಸಾಗಾಟಕ್ಕೆ ಬಳಸಿದ ಬೊಲೆರೋ ವಾಹನ, ಮೊಬೈಲ್ ಫೋನ್ ಗಳನ್ನು ವಶಪಡಿಸಿದ್ದಾರೆ.
ಯಶ್ ಕುಮಾರ್ ಶರ್ಮ ಐಪಿಎಸ್ ( ಎಎಸ್ಪಿ ಬಂಟ್ವಾಳ) , ಪ್ರಕಾಶ್ ದೇವಾಡಿಗ ( ಇನ್ಸ್ಪೆಕ್ಟರ್) ಮಂಜುನಾಥ್ PSI, ಪ್ರಶಾಂತ್, ಲೋಕೇಶ್, ನಜಿರ್, ವಿವೇಕ್, ಕುಮಾರ್, ಮಹದೇವ್, ಜಗದೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.



























