ವಿಟ್ಲ: ಮೇ 3ರಂದು ಮಧ್ಯಾಹ್ನ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೆ ಸ್ಕೂಟರ್ ಚಲಾಯಿಸುತ್ತಿದ್ದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಬಿ.ಎಸ್. ನಾಯಕ್ ಅವರು ಸಿಬ್ಬಂದಿಗಳೊಂದಿಗೆ ತಪಾಸಣೆ ನಡೆಸುತ್ತಿದ್ದಾಗ KA-19-HX-0497 ಸಂಖ್ಯೆಯ ಸ್ಕೂಟರ್‌ನಲ್ಲಿ ಬಂದ ಸವಾರನನ್ನು ತಡೆದು ನಿಲ್ಲಿಸಿದರು. ಈ ವೇಳೆ ಸವಾರನು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಆರೋಪಿಸಲಾಗಿದೆ.
ಅತನ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಪೊಲೀಸರು ವಿಚಾರಣೆ ನಡೆಸಿದಾಗ, ಆತನು ಬಂಟ್ವಾಳ ತಾಲೂಕಿನ ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26) ಎಂದು ತಿಳಿದುಬಂದಿದ್ದು, ಮಾದಕ ವಸ್ತು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಮಾದಕ ವಸ್ತು ಸೇವನೆ ದೃಢಪಟ್ಟಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 100/2026 ದಾಖಲಿಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 27(b), ಭಾರತೀಯ ನ್ಯಾಯ ಸಂಹಿತೆ 221 ಹಾಗೂ ಕೆಎಂವಿ ನಿಯಮ 230(1) ಮತ್ತು ಐಎಂವಿ ಕಾಯ್ದೆ 177 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.



























