ಕಡಬ: ಹಿಂದೂ ಮಹಿಳೆಯರು ಹಾಗೂ ಮಕ್ಕಳನ್ನು ಕೂಡಿಸಿ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಹಿಂದೂ ಸಂಘಟನೆಯ ಮಾಹಿತಿ ಮೇರೆಗೆ ಕಡಬ ಪೊಲೀಸರು ಮೇ 7ರ ರಾತ್ರಿ ಐತ್ತೂರಿನ ಮನೆಯೊಂದಕ್ಕೆ ದಾಳಿ ನಡೆಸಿದ ಘಟನೆ ನಡೆದಿದೆ.
ಐತ್ತೂರು ಗ್ರಾಮದ ಜೋಸೆಫ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು , ಬೆಂಗಳೂರು ಮೂಲದ ಸುಮಾರು 15ಕ್ಕೂ ಹೆಚ್ಚು ಮಂದಿ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಅಲ್ಲಿ ತಂಗಿರುವುದು ಪತ್ತೆಯಾಗಿದೆ.
ಈ ಕುರಿತು ವಿಶ್ವ ಹಿಂದೂ ಪರಿಷದ್ ಮುಖಂಡ ಪ್ರಮೋದ್ ನಂದುಗುರಿ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮನೆಯಲ್ಲಿ ಮತಾಂತರ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ದೂರು ಆಧರಿಸಿ ಪೊಲೀಸರು ರಾತ್ರೋರಾತ್ರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ಸಮಯವಾಗಿದ್ದರಿಂದ ಪೊಲೀಸರು ಮನೆಯೊಳಗೆ ಪ್ರವೇಶಿಸದೇ ಹೊರಭಾಗದಲ್ಲೇ ಕಾವಲು ಕಾಯುತ್ತಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ಸ್ಥಳದಲ್ಲಿದ್ದವರನ್ನು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಹಾಗೂ ಮುಂದಿನ ಕ್ರಮ ಇನ್ನಷ್ಟೇ ತಿಳಿದು ಬರಬೇಕಿದೆ.


























