ಮಡಿಕೇರಿ: ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಬಸ್ ಅಪಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ಇಂದು ಮುಂಜಾನೆ (ಮೇ 8) 5 ಗಂಟೆ ಸುಮಾರಿಗೆ ನಡೆದಿದೆ.
ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಮಡಿಕೇರಿ ಸಮೀಪದ ತಲುಪುತ್ತಿದ್ದಂತೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಬಸ್ ರಸ್ತೆ ಪಕ್ಕದ ಇಳಿಜಾರಿಗೆ ವಾಲಿಕೊಂಡಿದೆ.
ತನಗೆ ಹೃದಯಘಾತವಾಗುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಹೃದಯಾಘಾತ ತೀವ್ರವಾಗುತ್ತಿದ್ದಂತೆ ಚಾಲಕ ಚರಂಡಿಯ ಬಳಿ ಬಸ್ ನಿಲ್ಲಿಸಿದ್ದಾನೆ, ಈ ವೇಳೆ ಬಸ್ ಕೊಂಚ ವಾಲಿಕೊಂಡಿದೆ, ಆದಾಗ್ಯೂ ಪ್ರಯಾಣಿಕರ ಜೀವ ಉಳಿಸಿದ್ದಾನೆ. ಸ್ಥಳಕ್ಕೆ ಮಡಿಕೇರಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆ ಬದಿಯಲ್ಲಿ ಬಸ್ ವಾಲಿಕೊಂಡು ನಿಂತ ಕಾರಣ ಹೆದ್ದಾರಿಯಲ್ಲಿ ಇತರ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಿಲ್ಲ. ಇತ್ತ ಘಟನೆಯಿಂದ ಆತಂಕಗೊಂಡ ಪ್ರಯಾಣಿಕರಿಗೆ ಬೇರೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಬಸ್ಸಿನಲ್ಲಿ 24 ಮಂದಿ ಪ್ರಯಾಣಿಕರು ಇದ್ದು ಅವರ ಪ್ರಾಣ ಉಳಿಸಲು ಯಶಸ್ವಿಯಾದ ಚಾಲಕ ಬಳಿಕ ಹೃದಯಾಘಾತ ತೀವ್ರತೆಯಿಂದ ಕೊನೆಯುಸಿರೆಳೆದರು.


























