ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್ಸೆಬಲ್ ಮನೆಗೇ ಕಳ್ಳರು ನುಗ್ಗಿ ಸುಮಾರು 15.80 ಲಕ್ಷ ರೂ. ಮೌಲ್ಯದ ನಗ- ನಾಣ್ಯ ಕದ್ದೊಯ್ದ ಘಟನೆ ಮೇ 15ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಪದ್ಮುಂಜದ ಗಾಡಕೋಡಿ ಎಂಬಲ್ಲಿ ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆಯ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಗುಪ್ತವಾರ್ತೆ ಸಂಗ್ರಹದ ಕಾರ್ಯನಿರ್ವಹಿಸುತ್ತಿರುವ ಕರುಣಾಕರ ಗೌಡ ಪದ್ಮುಂಜ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಕರುಣಾಕರ ಗೌಡರು ಗ್ರಾಮದ ತನ್ನ ಮೂಲ ಮನೆಯಲ್ಲಿ ಒಬ್ಬರೇ ಇದ್ದು, ಪತ್ನಿ ಉದ್ಯೋಗ ನಿಮಿತ್ತ ಬೇರೆ ಊರಿನಲ್ಲಿರುವುದರಿಂದ ಮಕ್ಕಳು ಅವರ ಜೊತೆಗಿದ್ದಾರೆ.
ಮನೆಯಲ್ಲಿ ಪತ್ನಿ ತನ್ನ ಕೊಠಡಿಯಲ್ಲಿ ಚಿನ್ನಾಭರಣವನ್ನು ಕಪಾಟಿನಲ್ಲಿರಿಸಿ ಅದಕ್ಕೆ ಬೀಗ ಹಾಕಿ ಬೀಗದ ಕೀಯನ್ನು ತನ್ನೊಂದಿಗೆ ಕೊಂಡೊಯ್ದಿದ್ದಾರೆ. ಗುರುವಾರ ರಾತ್ರಿ ಮನೆಯಲ್ಲಿ ಒಂಟಿಯಾಗಿದ್ದ ಕರುಣಾಕರ ಗೌಡ ರವರು ಐಪಿಎಲ್ ಪಂದ್ಯಾಟ ವೀಕ್ಷಿಸಿ ಮಲಗಿದ್ದವರು ಬೆಳಗ್ಗೆ ಎದ್ದಾಗ ಪತ್ನಿಯ ಕೋಣೆಯ ಬೀಗ ಒಡೆದಿರುವುದು ಕಂಡು ಬಂದಿದೆ.
ಪರಿಶೀಲಿಸಿದಾಗ ಕೋಣೆಯೊಳಗಿದ್ದ ಕಪಾಟಿನ ಬೀಗ ಮುರಿದು ಕಪಾಟಿನೊಳಗಿದ್ದ 14 ಲಕ್ಷ ರೂ. ಮೌಲ್ಯದ ಹನ್ನೆರಡೂವರೆ ಪವನ್ ತೂಕದ ಚಿನ್ನಾಭರಣಗಳನ್ನು ಹಾಗೂ 80 ಸಾವಿರ ರೂ. ಮೌಲ್ಯದ ವಜ್ರದ ಆಭರಣ ಮತ್ತು 1 ಲಕ್ಷ ರೂ ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಸಿಬ್ಬಂದಿಯೋರ್ವರು ಮನೆಯಲ್ಲಿ ಮಲಗಿದ್ದ ವೇಳೆಯೇ ಮನೆಯೊಳಗಿಂದ ಬೀಗ ಮುರಿದು ಕಳವು ನಡೆದಿರುವುದು ಆಶ್ಚರ್ಯಕರವೆನಿಸಿದೆ.
ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ, ಠಾಣಾಧಿಕಾರಿ ಕೌಶಿಕ್ ಬಿ.ಸಿ., ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್.ರವರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.


























