ಜಿಮ್ ಮುಗಿಸಿಕೊಂಡು ಮನೆಗೆ ಬಂದಿದ್ದೇ ತಡ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಕೆಟಿಜೆ ನಗರದ ನಿವಾಸಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಅಂತರರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಂಗ್ ಕಾಂಪಿಟೇಷನ್‌ಗೆ ರೆಡಿಯಾಗುತ್ತಿದ್ದ 26 ವರ್ಷದ ಸುಶೀಲ್ ಕುಮಾರ್ ಸಾವನ್ನಪ್ಪಿದ್ದಾರೆ.
ರಾತ್ರಿ 8:30 ರ ಸುಮಾರಿಗೆ ಜಿಮ್ ಮುಗಿಸಿಕೊಂಡು ಮನೆಗೆ ಬಂದಿದ್ದ. ತಲೆ ಸುತ್ತುವುದಾಗಿ ಹೇಳಿ, ಕೆಲ ಕ್ಷಣದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಮಾರ್ಗ ಮಧ್ಯದಲ್ಲೇ ಸುಶೀಲ್ ಸಾವನ್ನಪ್ಪಿದ್ದಾನೆ. ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದ್ದು, ಸುಶೀಲ್ ನಿವಾಸದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಸುಶೀಲ್ ಕುಮಾರ್ ಬಾಡಿ ಬಿಲ್ಡಿಂಗ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ. ಅಲ್ಲದೇ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್‌ಗೆ ರೆಡಿಯಾಗುತ್ತಿದ್ದ. ಯಾವಾಗಲೂ ತನ್ನ ಜೊತೆಗೆ ಇದ್ದ ಯುವಕರು ಸಾಧನೆ ಮಾಡಬೇಕು, ನನಗಿಂತ ಹೆಚ್ಚಿನ ರೀತಿಯಲ್ಲಿ ಬೆಳೆಯಬೇಕು ಎಂದು ನಿತ್ಯ ಹತ್ತಾರು ಯುವಕರಿಗೆ ತರಬೇತಿ ನೀಡುತ್ತಿದ್ದ ಯುವಕನನ್ನು ಕಳೆದುಕೊಂಡು ಆತನ ಸ್ನೇಹಿತರು ಭಾವುಕರಾಗಿದ್ದಾರೆ.


























