ಬೆಳ್ತಂಗಡಿ: ಬೆಳುವಾಯಿ ಗ್ರಾಮದ ನಾಣಿಲ್ ಎಂಬಲ್ಲಿ ಯುವಕನೊಬ್ಬ ತನ್ನ ಅಕ್ಕನಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜು.31ರಂದು ಮುಂಜಾನೆ ನಡೆದಿದೆ.
ಸಯ್ಯದ್ ಅನ್ವರ್ ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಕೆಲವು ಸಮಯದಿಂದ ಇಸ್ಮಾಯಿಲ್ ಅವರ ಬಾಡಿಗೆ ಮನೆಯಲ್ಲಿ ಪತ್ನಿ ಮಗುವಿನೊಂದಿಗೆ ವಾಸವಾಗಿದ್ದು ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತೆನ್ನಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೀನಿನ ಟೆಂಪೊದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನ್ವರ್ ಕಳೆದ ಕೆಲವು ಸಮಯದಿಂದ ಕೆಲಸವಿಲ್ಲದೆ ಮನೆಯಲ್ಲಿದ್ದು ಒಂದೆರಡು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಬಂದಿದ್ದರು. ಗುರುವಾರ ಮತ್ತೆ ಪತಿ- ಪತ್ನಿ ನಡುವೆ ಜಗಳವಾಗಿದ್ದು ಪತ್ನಿ ತನ್ನ ಎರಡು ವರ್ಷದ ಪುತ್ರನೊಂದಿಗೆ ತವರು ಮನೆಗೆ ತೆರಳಿದ್ದರು.
ಈ ಹಿನ್ನೆಲೆಯಲ್ಲಿ ತನ್ನಕ್ಕನಿಗೆ ಸಂದೇಶ ಕಳುಹಿಸಿ ಪತ್ನಿ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆನ್ನಲಾಗಿದೆ. ಆತಂಕಕ್ಕೊಳಗಾದ ಮನೆಯವರು ಬಾಡಿಗೆ ಮನೆ ಬಳಿ ಬಂದಾಗ ಆಗಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



























