ನೆಲ್ಯಾಡಿ:ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೌಕ್ರಾಡಿ ಗ್ರಾಮದ ಪರಿಯಶಾಂತಿ ಬಳಿ ಬುಧವಾರ ಬೆಳಗ್ಗೆ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟಿದ್ದು, ಮತ್ತೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಕಾಸರಗೋಡು ಜಿಲ್ಲೆಯ ಏರಿಕ್ಕುಲಂ ನಿವಾಸಿ ರಿಜೇಶ್ ವಿ. (33) ಎಂದು ಗುರುತಿಸಲಾಗಿದೆ. ಗಾಯಾಳು ಕೊಕ್ಕಡ ಗ್ರಾಮದ ಹಳಿಂಗೇರಿ ನಿವಾಸಿ ಗಿರೀಶ್ ಆಗಿದ್ದಾರೆ.
ಗುಂಡ್ಯದಿಂದ ಕೊಕ್ಕಡ ಕಡೆಗೆ ಬರುತ್ತಿದ್ದ ಗಿರೀಶ್ ಅವರ ಬೈಕ್ ತಿರುಗಿಸುವ ವೇಳೆ ಹಿಂಬದಿಯಿಂದ ಬಂದ ರಿಜೇಶ್ ಅವರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಿಜೇಶ್ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಗಿರೀಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆಲ್ಯಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



























