ಬಂಟ್ವಾಳ : ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅಪೂರ್ವ ಐತಿಹಾಸಿಕ ಶಿಲಾಶಾಸನ ವೀರಕಂಭ ಸಮೀಪದ ಶ್ರೀ ಗುಡ್ಡೆ ಚಾಮುಂಡಿ- ಪಂಜುರ್ಲಿ- ಮಲೆಕೊರತಿ ದೈವಗಳ ಚಾವಡಿ ದಾಸಗದ್ದೆಯ ಕಂಬಳದ ಗದ್ದೆಯ ಬದಿಯಲ್ಲಿ ಇರುವಿಕೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಚಿತ್ರ ರ ನಡುವಿನಲ್ಲಿ ಶಿವಲಿಂಗ ದ ಚಿತ್ರವಿದೆ.ಬರಹಗಳು ತುಂಬಾ ಇದ್ದು ಅಸ್ಪಷ್ಟವಾಗಿದೆ ಮತ್ತು ಅಪೂರ್ವ ಮಾಹಿತಿಯನ್ನು ಒದಗಿಸುವ ಸಾಧ್ಯತೆ ಇದೆ. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರ ಕಾಲದಲ್ಲಿ ದಾನ ಭೂಮಿಯನ್ನು ಗುರುತಿಸುವ ಕಲ್ಲೇ ಇದು..? ಅಥವಾ ಬಂಗರಸನ ಕಾಲದಲ್ಲಿ ಪ್ರತೀ ಗ್ರಾಮದ ದೇವರು ಮತ್ತು ದೈವಗಳ ವ್ಯಾಪ್ತಿಯಲ್ಲಿ ಬರುವ ಭೂಮಿಯನ್ನು ಗುರುತಿಸಲ್ಪಡುವ ಉದ್ದೇಶ ದಿಂದ ಸ್ಥಾಪಿಸಿದ ಕಲ್ಲು ಇದಾಗಿರಬಹುದೇ ಎಂಬುದು ಸದ್ಯದ ಕುತೂಹಲವಾಗಿದೆ.
ನಾಲ್ಕು ಗುತ್ತು ಮೂರು ಗ್ರಾಮದ, ಅರಸು ದೈವ ಶ್ರೀ ಗುಡ್ಡೆ ಚಾಮುಂಡಿ ದೈವ ಈ ಪರಿಸರದಲ್ಲಿ ಗ್ರಾಮ ದೈವವಾಗಿದ್ದು ಸೀಮೆಯ ಅರಸು ದೈವಗಳಿಂದ ಅರ್ಧ ಸೀಮೆಯ ಭೂ ಭಾಗದ ಅಧಿಕಾರವನ್ನು ಸೆಳೆದುಕೊಂಡ ದೈವ ಎಂಬ ಹೆಗ್ಗಳಿಕೆ ಇದೆ. ಈ ದೈವದ ಅಧೀನದಲ್ಲಿ ಮೂರು ಗ್ರಾಮದಲ್ಲಿ 5 ಕಂಬಳ ಮತ್ತು 16 ಬಾಕಿಮಾರು ಗದ್ದೆಗಳು ಒಳಪಡುತ್ತದೆ. ಈ ದಾಸಗದ್ದೆ ಅಥವಾ ದಾಸಖಂಡ ಕಂಬಳದ ಗದ್ದೆಯ ಬದಿಯಲ್ಲಿ ದೈವಗಳ ಚಾವಡಿ ಸಮೀಪದಲ್ಲಿ ಈ ಶಿಲಾ ಶಾಸನ ಪತ್ತೆಯಾಗಿರುವುದು ಐತಿಹಾಸಿಕವಾಗಿ ಒಂದು ಮಹತ್ವದ ಸಂಗತಿಯಾಗಿದೆ. ತಜ್ಞ ಇತಿಹಾಸಕಾರರು ಇದನ್ನು ಓದುವ ಪ್ರಯತ್ನ ಮಾಡಿದರೆ ಈ ಶಾಸನ ಕಲ್ಲಿನ ರೋಚಕ ಇತಿಹಾಸ ಬೆಳಕಿಗೆ ಬರಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.