ಕಾಸರಗೋಡು: ಕ್ಯಾನ್ಸರ್‌ನಿಂದ ಮೃತಪಟ್ಟ ಮೀಂಜ ಸಮೀಪದ ಚಿಗುರುಪಾದೆಯ ನಾರಾಯಣ (64) ಅವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸುವ ಮೂಲಕ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ಮಾನವೀಯತೆ ಮತ್ತು ಸೌಹಾರ್ದತೆಗೆ ಮಾದರಿಯಾದರು.
ಒಂದು ತಿಂಗಳ ಹಿಂದೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾರಾಯಣ ಅವರನ್ನು ಇರ್ಫಾನಾ ಇಕ್ಬಾಲ್ ಅವರ ಪ್ರಯತ್ನದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟ ಬಳಿಕ ಕುಟುಂಬಸ್ಥರು ಮೃತದೇಹ ಸ್ವೀಕರಿಸಲು ಮುಂದೆ ಬರದ ಕಾರಣ, ಅವರ ಒಪ್ಪಿಗೆಯ ಮೇರೆಗೆ ಮೃತದೇಹವನ್ನು ಉಪ್ಪಳ ಚೆರುಗೋಳಿ ಸಾರ್ವಜನಿಕ ಸ್ಮಶಾನಕ್ಕೆ ಕರೆತಂದು ಹಿಂದೂ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಈ ಕಾರ್ಯದಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಿಯಾಜ್ ಪಿಲಾತ್ತರ, ಮೆಹಮ್ಮೂದ್ ಕೈಕಂಬ ಸೇರಿದಂತೆ ಹಲವರು ಸಹಕರಿಸಿದರು. ಸಮಾಜಸೇವೆಯಲ್ಲಿ ಸಕ್ರಿಯರಾಗಿರುವ ಇರ್ಫಾನಾ ಇಕ್ಬಾಲ್ ಅವರು ಉಪ್ಪಳದ ಶೇಖ್ ಸಯ್ಯಿದ್ ವೃದ್ಧ ಮಂದಿರದ ಸ್ಥಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.



























