ಅಕ್ರಮ–ಸಕ್ರಮ, 94C ಅರ್ಜಿಗಳ ತುರ್ತು ವಿಲೇವಾರಿಗೆ ಪುತ್ತಿಲ ಪರಿವಾರ ಮನವಿ
ಪುತ್ತೂರು: ತಾಲೂಕಿನ ಸಾರ್ವಜನಿಕರು ಹಲವು ವರ್ಷಗಳಿಂದ ಎದುರಿಸುತ್ತಿರುವ ಅಕ್ರಮ–ಸಕ್ರಮ ಹಾಗೂ 94C ಅರ್ಜಿಗಳ ವಿಲೇವಾರಿ ವಿಳಂಬ ಮತ್ತು ಪೌತಿ ಖಾತೆ ಬದಲಾವಣೆಯಲ್ಲಿನ ಸಮಸ್ಯೆಗಳ ಕುರಿತು ಪುತ್ತಿಲ ಪರಿವಾರದ ನಿಯೋಗವು ತಹಶೀಲ್ದಾರ್‌ರನ್ನು ಭೇಟಿ ಮಾಡಿ ಚರ್ಚಿಸಿತು.
ಅಕ್ರಮ–ಸಕ್ರಮ ಯೋಜನೆಯಡಿ ಹಲವು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ತಮ್ಮ ಅರ್ಜಿಗಳ ವಿಲೇವಾರಿಗಾಗಿ ಕಾಯುತ್ತಿರುವುದನ್ನು ನಿಯೋಗವು ತಹಶೀಲ್ದಾರ್‌ರ ಗಮನಕ್ಕೆ ತಂದಿತು. ಇದೇ ವೇಳೆ, ಕರ್ನಾಟಕ ಭೂ ಕಂದಾಯ ಕಾಯ್ದೆಯ 94C ಅಡಿಯಲ್ಲಿ ಸಲ್ಲಿಸಿರುವ ಹಲವು ಅರ್ಜಿಗಳು ಕೂಡ ಬಾಕಿ ಉಳಿದಿದ್ದು, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅಗತ್ಯ ದಾಖಲೆಗಳ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಗಮನ ಸೆಳೆಯಲಾಯಿತು.
ಅಕ್ರಮ–ಸಕ್ರಮ ಮತ್ತು 94C ಅಡಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ, ಅರ್ಹ ಅರ್ಜಿದಾರರ ಅರ್ಜಿಗಳನ್ನು ನಿಯಮಾನುಸಾರ ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವಂತೆ ತಹಶೀಲ್ದಾರ್‌ರಿಗೆ ಮನವಿ ಮಾಡಲಾಯಿತು.
ಇದರೊಂದಿಗೆ, ಕುಟುಂಬದ ಸದಸ್ಯರ ನಿಧನದ ಬಳಿಕ ಜಮೀನು ಹಾಗೂ ಆಸ್ತಿಗಳ ಪೌತಿ ಖಾತೆ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ವಿಳಂಬ ಮತ್ತು ಕಚೇರಿ ಮಟ್ಟದ ಸಮಸ್ಯೆಗಳ ಬಗ್ಗೆಯೂ ನಿಯೋಗವು ಗಮನ ಸೆಳೆಯಿತು. ಅರ್ಹ ಪ್ರಕರಣಗಳಲ್ಲಿ ಪೌತಿ ಖಾತೆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಲಾಯಿತು.
ಸಾರ್ವಜನಿಕರ ಬಹುಕಾಲದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರದ ನಿಯೋಗವು ತಹಶೀಲ್ದಾರ್‌ರನ್ನು ಒತ್ತಾಯಿಸಿತು.




























