ಭಟ್ಕಳ: ಕುಟುಂಬದ ಆರ್ಥಿಕ ಸಂಕಷ್ಟ ನಿವಾರಿಸಲು ಬೆಂಗಳೂರಿಗೆ ತೆರಳಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಯುವತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತರನ್ನು ಬೆಳಕೆ ಗ್ರಾಮದ ನಿವಾಸಿ ದೀಪಾಲಿ ಗುರುಗೊಂಡ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ದೀಪಾಲಿ ಅವರು ಸಹೋದ್ಯೋಗಿಗಳೊಂದಿಗೆ ಮದುವೆ ಸಮಾರಂಭಕ್ಕೆ ತೆರಳಿದ್ದು, ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಬೆಂಗಳೂರಿನ ಕೆ.ಆರ್. ಪುರಂ ಸಮೀಪ ಅವರಿದ್ದ ವಾಹನ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ರಕ್ಷಿಸುವ ಗಡಿಬಿಡಿಯಲ್ಲಿ ದೀಪಾಲಿ ಅವರಿಗೆ ಮೇಲ್ನೋಟಕ್ಕೆ ಸಣ್ಣಪುಟ್ಟ ಗಾಯಗಳಾಗಿರುವಂತೆ ಕಂಡಿತ್ತು.
ಅಪಘಾತದ ಬಳಿಕ ಅವರು ಸ್ವತಃ ತಮ್ಮ ತಂದೆಯ ಮೊಬೈಲ್ ಸಂಖ್ಯೆ ಹಾಗೂ ಮನೆಯ ವಿಳಾಸವನ್ನು ಅಲ್ಲಿದ್ದವರಿಗೆ ನೀಡಿದ್ದರು.ಆದರೆ, ತಲೆ ಮತ್ತು ದೇಹದ ಒಳಭಾಗದಲ್ಲಿ ತೀವ್ರ ರಕ್ತಸ್ರಾವ ಹಾಗೂ ಆಂತರಿಕ ಗಾಯಗಳಾಗಿದ್ದ ಪರಿಣಾಮ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಸ್ವಗ್ರಾಮ ಬೆಳಕೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಈ ಸಂಬಂಧ ಕೆ.ಆರ್. ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ಕುರಿತು ತನಿಖೆ ಮುಂದುವರಿಸಿದ್ದಾರೆ. ದೀಪಾಲಿ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧು-ಬಳಗ ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕ ಆವರಿಸಿದೆ.



























