ಪುತ್ತೂರು, ಜೂ.28: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆಯಲ್ಲಿ ಕಂಡುಬಂದ ಸೂಚನೆಯಂತೆ, ದೇವಳದ ಬಳಿಯ ಅಯ್ಯಪ್ಪ ವಿಗ್ರಹವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಹಳೆಯ ಅಯ್ಯಪ್ಪ ಮಂದಿರದ ತೆರವು ಕಾರ್ಯಕ್ಕೆ ಭಾನುವಾರ ಬೆಳಗ್ಗೆ ಮುಹೂರ್ತ ನೆರವೇರಿಸಲಾಯಿತು.
ದೇವಳದಲ್ಲಿ ಬೆಳಗಿನ ಪೂಜೆಯ ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ತುಪ್ಪದ ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿ ತೆರವು ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಜೆಸಿಬಿ ಬ್ರೇಕರ್ ಯಂತ್ರದ ಮೂಲಕ ಹಳೆಯ ಅಯ್ಯಪ್ಪ ಮಂದಿರದ ತೆರವು ಕಾರ್ಯ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ನಡುಬೈಲುಗುತ್ತು ಗೋಪಾಲ ಪೂಜಾರಿ ಸೇರಿದಂತೆ ದೇವಸ್ಥಾನದ ಪ್ರಮುಖರು ಹಾಗೂ ಭಕ್ತರು ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ, ಪ್ರಶ್ನಾಚಿಂತನೆಯಲ್ಲಿ ದೊರೆತ ನಿರ್ದೇಶನದ ಅನುಸಾರ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸಿಕೊಂಡು ಈ ಕಾರ್ಯವನ್ನು ಕೈಗೊಳ್ಳಲಾಗಿದೆ.


























